bagalkot

ಜಮಖಂಡಿಯಲ್ಲಿ ನಡುರಾತ್ರಿ ಅಗ್ನಿ ಅನಾಹುತ: ಮೂರು ಮಹಡಿ ಮನೆ ಭಸ್ಮ, ಸಮಯಪ್ರಜ್ಞೆಯಿಂದ ೮ ಜೀವಗಳು ಪಾರು!

Share

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಸುಕಿನ ಜಾವ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ನಗರದ ಮೊರೆ ಪ್ಲಾಟ್‌ನಲ್ಲಿರುವ ಪ್ರಕಾಶ್ ಚೌರಡ್ಡಿ ಎಂಬುವವರ ಮೂರು ಮಹಡಿಯ ಮನೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಇಡೀ ಮನೆಗೆ ಆವರಿಸಿದೆ. ಇನ್ನು ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಮನೆಯಲ್ಲಿದ್ದ ಕುಟುಂಬಸ್ಥರು ಹಾಗೂ ಕಾರ್ಮಿಕರು ಸಮಯಪ್ರಜ್ಞೆ ಮೆರೆದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಮಖಂಡಿ ನಗರದ ಮೊರೆ ಪ್ಲಾಟ್ ನಿವಾಸಿ ಪ್ರಕಾಶ ಚೌರಡ್ಡಿ ಅವರಿಗೆ ಸೇರಿದ ಮೂರು ಮಹಡಿಯ ಮನೆಯಲ್ಲಿ ನಸುಕಿನ ಜಾವದಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಹೊಸ ಪೀಠೋಪಕರಣಗಳನ್ನು (ಫರ್ನಿಚರ್) ನಿರ್ಮಿಸಲು ಐದು ಜನ ಕಾರ್ಮಿಕರು ಬಂದಿದ್ದು, ಅವರು ಹಾಗೂ ಕುಟುಂಬದ ಮೂವರು ಸದಸ್ಯರು ಮನೆಯಲ್ಲೇ ಗಾಢ ನಿದ್ರೆಯಲ್ಲಿದ್ದರು. ಈ ವೇಳೆ ಆಕಸ್ಮಿಕವಾಗಿ ಮೊದಲು ಕೆಳ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಇಡೀ ಮೂರು ಮಹಡಿಯ ಮನೆಗೆ ವ್ಯಾಪಿಸಿದೆ. ತಕ್ಷಣವೇ ಎಚ್ಚೆತ್ತ ಕುಟುಂಬಸ್ಥರು ಹಾಗೂ ಕಾರ್ಮಿಕರು ಒಟ್ಟಾಗಿ ಸಮಯಪ್ರಜ್ಞೆ ಮೆರೆದು ಮನೆಯಿಂದ ಹೊರಗೆ ಓಡಿಬಂದಿದ್ದರಿಂದ ಭಾರಿ ಜೀವಹಾನಿಯೊಂದು ತಪ್ಪಿದಂತಾಗಿದೆ.

ಬೆಂಕಿಯ ಜ್ವಾಲೆಗೆ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಲೆಬಾಳುವ ಹೊಸ ಪೀಠೋಪಕರಣಗಳು ಹಾಗೂ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಒಟ್ಟು ೮ ಜನ ಪ್ರಾಣಾಪಾಯದಿಂದ ಪಾರಾಗಿದ್ದು, ಜಮಖಂಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!