ಮಳೆಗಾಲದ ಆರಂಭವಾಗುತ್ತಿದ್ದಂತೆಯೇ ಬೆಳಗಾವಿಯ ನಾಲಿಗೆ ಸವಿಬಯಸುವ ಆಹಾರ ಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಪ್ರಸ್ತುತ ಬೆಳಗಾವಿಯ ಕ್ಯಾಂಪ್ ಮಾರುಕಟ್ಟೆಗೆ ಘಟಪ್ರಭಾ ಮತ್ತು ಹಿಡಕಲ್ ಜಲಾಶಯ ಪ್ರದೇಶಗಳಿಂದ ಭಾರಿ ಪ್ರಮಾಣದಲ್ಲಿ ಏಡಿಗಳು ಮಾರಾಟಕ್ಕೆ ಬರುತ್ತಿದ್ದು, ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ.


ಮಳೆಗಾಲದ ದಿನಗಳಲ್ಲಿ ಬೆಳಗಾವಿಯ ಪಶ್ಚಿಮ ಭಾಗದ ಚಂದಗಡ ತಾಲೂಕಿನ ತಾಮ್ರಪರ್ಣಿ ನದಿಯ ಏಡಿಗಳಿಗೆ ಹೆಚ್ಚಿನ ಬೇಡಿಕೆಯಿರುತ್ತದೆ. ಆದರೆ ಸದ್ಯ ಬೆಳಗಾವಿ ನಗರದಲ್ಲಿ ಹಿಡಕಲ್ ಜಲಾಶಯ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಬರುವ ಏಡಿಗಳ ಆವಕ ಗಣನೀಯವಾಗಿ ಹೆಚ್ಚಾಗಿದೆ. ಬೆಳಗಾವಿ ಕ್ಯಾಂಪ್ನ ಫಿಶ್ ಮಾರ್ಕೆಟ್ ಎದುರಿನ ರಸ್ತೆಯಲ್ಲಿ ಈ ಏಡಿಗಳನ್ನು ಮಾರಾಟಕ್ಕಿಡಲಾಗುತ್ತಿದ್ದು, ಗ್ರಾಹಕರ ಗಿಜಿಗುಡುವ ರಶ್ ಕಂಡುಬರುತ್ತಿದೆ.
ಘಟಪ್ರಭಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ನೂರಾರು ಮಹಿಳಾ ಮಾರಾಟಗಾರರು ಪ್ರತಿದಿನ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಈ ಮಹಿಳೆಯರ ಕುಟುಂಬಸ್ಥರು ರಾತ್ರಿಯಿಡೀ ನದಿ ಮತ್ತು ಜಲಾಶಯದ ಪ್ರದೇಶಗಳಲ್ಲಿ ಏಡಿಗಳನ್ನು ಹಿಡಿಯುತ್ತಾರೆ. ನಂತರ ಬೆಳಗ್ಗೆ ಘಟಪ್ರಭಾದಿಂದ ರೈಲಿನ ಮೂಲಕ ಈ ಮಹಿಳೆಯರು ಬೆಳಗಾವಿ ನಗರಕ್ಕೆ ತಲುಪುತ್ತಾರೆ. ಪ್ರತಿದಿನ ಸುಮಾರು 200ಕ್ಕೂ ಹೆಚ್ಚು ಮಹಿಳಾ ಮಾರಾಟಗಾರರು ಇಲ್ಲಿ ಏಡಿ ಮಾರಾಟ ವ್ಯವಹಾರ ನಡೆಸುತ್ತಿದ್ದಾರೆ.

ತಾಜಾ ಏಡಿಗಳು ಸಿಗುತ್ತಿರುವುದರಿಂದ ಬೆಳಗಾವಿ ನಗರ ಸೇರಿದಂತೆ ಶಹಾಪುರ, ಅನಗೋಳ ಮತ್ತು ಟಿಳಕವಾಡಿ ಪ್ರದೇಶದ ಆಹಾರ ಪ್ರಿಯರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಮಳೆಯ ಅಬ್ಬರ ಹೆಚ್ಚಾದಂತೆ ಈ ಏಡಿಗಳ ಬೇಡಿಕೆ ಮತ್ತು ಬೆಲೆ ಎರಡೂ ಹೆಚ್ಚಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಬೈಟ್
ಕೇವಲ ಬೆಳಗಾವಿ ಮಾತ್ರವಲ್ಲದೆ ಗಡಿ ಭಾಗದ ಇತರ ಹಳ್ಳಿಗಳಿಂದಲೂ ಜನರು ವೀಕೆಂಡ್ನಲ್ಲಿ ಈ ಏಡಿಗಳನ್ನು ಖರೀದಿಸಲು ಕ್ಯಾಂಪ್ ಪ್ರದೇಶಕ್ಕೆ ಧಾವಿಸುತ್ತಿದ್ದಾರೆ.

