ಈ ರೈತ ವೃತ್ತಿಯಿಂದ ಮೆಕ್ಯಾನಿಕಲ್ ಇಂಜನಿಯರ ಆಗಿ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿದರೆ ಪ್ರವೃತ್ತಿಯಿಂದ ಮಾತ್ರ ಮಾದರಿ ಕೃಷಿಕ. ಪಾಳು ಬಿದ್ದ ತಮ್ಮ ಪೂರ್ವಜರ 15 ಎಕರೆ ಜಮಿನನ್ನು ಇಂದು ಹಸಿರು ತೋಟವನ್ನಾಗಿ ರೂಪಿಸಿದ್ದಾರೆ. ಹಾಗಾದರೆ ಆ ರೈತನಾರು…? ಇರುವದಾದರೂ ಎಲ್ಲಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್…


ಹೌದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಆರ್ ಎಸ್ ಗ್ರಾಮದ ಚಂದ್ರಶೇಖರ ಬೋರಣ್ಣನವರ ವೃತ್ತಿಯಿಂದ ಇಂಜನಿಯರ್ ಆದರೂ ಪ್ರವೃತ್ತಿಯಿಂದ ಮಾತ್ರ ಕೃಷಿಕರು. ಕೋವಿಡ್ ನಂತರ ಗ್ರಾಮೀಣ ಬದುಕಿನತ್ತ ಹೆಚ್ಚಿನ ಆಸಕ್ತಿ ತೋರಿಸಿದ ಚಂದ್ರಶೇಖರ ಬೋರಣ್ಣನವರ ಪಾಳು ಬಿದ್ದ ತಮ್ಮ ಪೂರ್ವಜರ 15 ಎಕರೆ ಜಮೀನಿನನ್ನು ಇಂದು ಹಚ್ಚ ಹಸಿರಿನ ತೋಟವಾಗಿ ಮಾರ್ಪಾಡು ಮಾಡಿದ್ದಾರೆ. ದೀರ್ಘಾವದಿ ಆದಾಯ ನೀಡುವ ಬಹುವಾರ್ಷಿಕ ಬೆಳೆಗಳತ್ತ ಇವರು ಹೆಚ್ಚಿನ ಗಮನ ಹರಿಸಿದ್ದಾರೆ…

ಚಂದ್ರಶೇಖರ ಬೋರಣ್ಣನವರ ಅವರು ತಮ್ಮ ತೋಟದಲ್ಲಿ ಕಳೆದ ಮೂರು ವರ್ಷಗಳಲ್ಲಿ 1500 ಶ್ರೀಗಂಧ, 1500 ಸಾಗವಾನಿ, 1000 ಮಹಾಗನಿ, ಸೇರಿದಂತೆ ವಿವಿಧ ಜಾತಿಯ ಮರಗಳನ್ನು ಬೆಳೆದಿದ್ದು ಅವುಗಳು ಈಗ ಉತ್ತಮವಾಗಿ ಬೆಳೆದು ನಿಂತಿವೆ. ಕೋಟಿ ವೃಕ್ಷ ಅಭಿಯಾನದ ಅಡಿ ಆಲಮಟ್ಟಿಯ ಅರಣ್ಯ ಇಲಾಖೆಯಿಂದ ಶ್ರೀಗಂಧದ ಮರಗಳನ್ನು ಖರೀದಿಸಿ ತಂದು ನೆಟ್ಟಿದ್ದಾರೆ. 9 ಎಕರೆ ಜಮೀನಿನಲ್ಲಿ 515 ಪಾಮ್ ಗಿಡಗಳನ್ನು ತ್ರೀಕೋನ ಮಾದರಿಯಲ್ಲಿ ಬೆಳೆಸಿದ್ದು ಮೂರು ವರ್ಷದ ಬಳಿಕ, ಮೊದಲ ಫಸಲು ದೊರಕಿದೆ. ಇದರಿಂದ ಸದ್ಯ 25 ಸಾವಿರ ಆದಾಯ ದೊರಕಿದ್ದು ಮುಂಬರುವ ದಿನಗಳಲ್ಲಿ ಇದರ ಆದಾಯ ಹೆಚ್ಚಳವಾಗುತ್ತದೆ. ತಮ್ಮ ತೊಟದಲ್ಲಿ 650 ಗಿಡ ಕೇಸರ ಮಾವು, 350 ಅಲ್ವಾ ನೋವಾ ಮಾವು, ಪೇರು ಹಾಗೂ ಕರಿಬೇವು ಗಿಡಗಳನ್ನು ಬೆಳೆಸಿದ್ದಾರೆ. ತಮ್ಮ ಜಮೀನಿಗೆ ಕೃಷ್ಣಾ ನದಿಯಿಂದ ಪೈಪ್ ಲೈನ್ ಮಾಡಿಕೊಂಡು ಹಾಗೂ ಬೋರ್ ಬೇಲ್ ಮೂಲಕ ನೀರಿನ ವ್ಯವಸ್ಥೆ ಮಾಡಿಕೊಂಡು, ಎಲ್ಲ ಗಿಡಗಳಿಗೂ ಡ್ರಿಪ್ ಮೂಲಕ ಹನಿ ನೀರಾವರಿ ಪದ್ದತಿಯ ಮೂಲಕ ನೀರುಣಿಸುತ್ತಿದ್ದಾರೆ. ಹೈನುಗಾರಿಕೆ, ಕೋಳಿ ಸಾಕಾಣಿಕೆ ಮಾಡುವ ಆಲೋಚನೆಯಲ್ಲಿದ್ದು, ಬಹುವಾರ್ಷಿಕ ಬೆಳೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಲಾಭದಾಯಕ ಕೃಷಿ ಮಾಡುತ್ತಿದ್ದಾರೆ. ತಮ್ಮ ತೋಟದಲ್ಲಿ ಕೃಷಿ ಕಾರ್ಮಿಕರನ್ನಿಟ್ಟು ಕೃಷಿ ಮಾಡಿಸುತ್ತಾರೆ. ಇವರ ಕೃಷಿ ಕಾರ್ಯವನ್ನು ಇತರೆ ರೈತರಿಗೆ ಮಾದರಿಯಾಗಿದೆ. ಇವರ ತೋಟಕ್ಕೆ ಸುತ್ತಲಿನ ರೈತರು ಬಂದು ನೋಡಿಕೊಂಡು ಹೋಗುತ್ತಿದ್ದಾರೆ…
ಒಟ್ಟಿನಲ್ಲಿ ಐಟಿ ಸಿಟಿಯ ಉದ್ಯೋಗದ ಜೊತೆಗೆ ಮಣ್ಣಿನ ಮಗನಾಗಿ ಸಾಧನೆ ಮಾಡುತ್ತಿರುವ ಇಂಜನಿಯರ್ ಚಂದ್ರಶೇಖರ ಅವರ ಕೃಷಿ ಒಲವು ನಿಜಕ್ಕೂ ಇತರೆ ರೈತರಿಗೆ ಮಾದರಿಯೇ ಸರಿ…
ವಿಜಯಕುಮಾರ ಸಾರವಾಡ
ಇನ್ ನ್ಯೂಜ್ ವಿಜಯಪುರ
