ಆಷಾಢ ಏಕಾದಶಿ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ನಂದಿಹಳ್ಳಿಯ ವಿಠ್ಠಲನ ಭಕ್ತರು ಪಂಢರಪುರದ ಪಾಂಡುರಂಗನ ದರ್ಶನಕ್ಕಾಗಿ ಹರಗುರು ಚರಿತ್ರೆಯೊಂದಿಗೆ ಭವ್ಯ ಪಾದಯಾತ್ರೆ ಆರಂಭಿಸಿದ್ದಾರೆ. ತಾಳ, ಮೃದಂಗ ಹಾಗೂ ಹರಿನಾಮ ಜಯಘೋಷದೊಂದಿಗೆ ಸಾಗುತ್ತಿರುವ ಈ ವಾರಕರಿ ಮಂಡಳದ ಮನಮೋಹಕ ದೃಶ್ಯಗಳು ಭಕ್ತಿಭಾವದ ಪರಾಕಾಷ್ಠೆಯನ್ನು ಮೆರೆಯುತ್ತಿವೆ.

ಆಷಾಢ ಏಕಾದಶಿ ಬಂತೆಂದರೇ ಸಾಕು. ಬೆಳಗಾವಿ ನಗರ ಮತ್ತು ಪ್ರದೇಶದಲ್ಲಿ ತಾಳ ಮೃದಂಗಗಳ ಧ್ವನಿ ಕೇಳಿಸಲಾರಂಭಿಸುತ್ತದೆ. ಹೌದು, ಇದೇ ಜುಲೈ 25 ರಂದು ಆಷಾಢ ಏಕಾದಶಿ ಇರುವ ಹಿನ್ನೆಲೆ ಪಾಂಡುರಂಗನ ಭಕ್ತರು ಪಂಢರಪುರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಂದಿಹಳ್ಳಿಯಿಂದ ಅಧಿಕೃತವಾಗಿ ಆರಂಭಗೊಂಡ ಈ ದಿಂಡಿ (ಪಾದಯಾತ್ರೆ), ಮೊದಲ ದಿನ ರಾಜಹಂಸಗಡದಲ್ಲಿ ವಸತಿ ಹೂಡಿತ್ತು. ಇಂದು ಬೆಳಗಿನ ಜಾವದಿಂದಲೇ ಕಾಕತಿಯತ್ತ ತನ್ನ ಪ್ರಯಾಣ ಬೆಳೆಸಿದೆ. ದಾರಿಯುದ್ದಕ್ಕೂ ಮಹಿಳೆಯರು ತುಳಸಿ ವೃಂದಾವನವನ್ನು ತಲೆಯ ಮೇಲೆ ಹೊತ್ತು ಸಾಗುತ್ತಿದ್ದರೆ, ಇತ್ತ ವಾರಕರಿಗಳು ನಿವೃತ್ತಿ, ಜ್ಞಾನದೇವ, ಸೋಪಾನ, ತುಕಾರಾಮ ಹಾಗೂ ಮುಕ್ತಾಬಾಯಿಯವರ ನಾಮಸ್ಮರಣೆ ಮಾಡುತ್ತಾ, ‘ಜಯ ಜಯ ರಾಮಕೃಷ್ಣ ಹರಿ’ ಎಂಬ ಜಯಘೋಷದೊಂದಿಗೆ ಭಜನೆ-ಕೀರ್ತನೆಗಳಲ್ಲಿ ತಲ್ಲೀನರಾಗಿ ಹೆಜ್ಜೆ ಹಾಕುತ್ತಿದ್ದಾರೆ.
ಪ್ರತಿದಿನ ಸುಮಾರು 30 ರಿಂದ 35 ಕಿಲೋ ಮೀಟರ್ ಕ್ರಮಿಸಲಿರುವ ಈ ಪಾದಯಾತ್ರೆಯು ಇನ್ನು 10 ದಿನಗಳಲ್ಲಿ ಮಹಾರಾಷ್ಟ್ರದ ಪಂಢರಪುರವನ್ನು ತಲುಪಲಿದೆ. ಈ ಕುರಿತು ‘ಇನ್ ನ್ಯೂಸ್’ ವಾಹಿನಿಯೊಂದಿಗೆ ಮಾತನಾಡಿದ ವಾರಕರಿ ಪ್ರಮುಖರಾದ ವಿಠ್ಠಲ ಶಿಂಗೆನ್ನವರ, ಈ ಭಕ್ತಿ ಪ್ರಧಾನ ಪಾದಯಾತ್ರೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದು, ವರ್ಷದಿಂದ ವರ್ಷಕ್ಕೆ ಪಾಂಡುರಂಗನ ದರ್ಶನಕ್ಕೆ ಸಾಗುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
