ಕಾಗವಾಡದ ಕೃಷ್ಣಾ ನದಿ ತೀರದಲ್ಲಿ ರಾಜ್ಯ ಸರ್ಕಾರದ ‘ಅಮೃತ-೨’ ಕುಡಿಯುವ ನೀರಿನ ಯೋಜನೆ ಜಾಕ್ವೆಲ್ ನಿರ್ಮಿಸುವಾಗ ನಡೆದ ಬ್ಲಾಸ್ಟಿಂಗ್ನಿಂದಾಗಿ, ಶೇಡಬಾಳ ಗ್ರಾಮದ ರೈತರ ಏತ ನೀರಾವರಿ ಯೋಜನೆಯ ಜಾಕ್ವೆಲ್ ಉರುಳಿ ಬಿದ್ದಿದೆ. ಈ ಏತ ನೀರಾವರಿ ಯೋಜನೆಯ ಬಡ ರೈತರಿಗೆ ಸರ್ಕಾರ ಯಾವುದೇ ಸ್ಥಿತಿಯಲ್ಲಾದರೂ ಸಹಾಯ ಮಾಡಲೇಬೇಕು ಎಂದು ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಶುಕ್ರವಾರ ಉಗಾರದಲ್ಲಿರುವ ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಕೃಷ್ಣಾ ರೈತ ಸೇವಾ ಸಂಘ ಹಾಗೂ ಶಾಂತಿನಾಥ ನೀರಾವರಿ ಯೋಜನೆ ಪ್ರಾರಂಭವಾಗಿ 30 ವರ್ಷಗಳು ಕಳೆದಿವೆ. ಈ ಭಾಗದ ರೈತರು ಸರ್ಕಾರದ ಯಾವುದೇ ಸಹಾಯ, ಸೌಲತ್ತುಗಳನ್ನು ಪಡೆದುಕೊಳ್ಳದೆ, ತಮ್ಮ ಜಮೀನುಗಳನ್ನು ಬ್ಯಾಂಕ್ಗೆ ಅಡವಿಟ್ಟು ಸಾಲ ಸೂಲ ಮಾಡಿ ಈ ಯೋಜನೆ ಪ್ರಾರಂಭಿಸಿದ್ದರು. ಈ 30 ವರ್ಷಗಳಲ್ಲಿ ನದಿಗೆ ಎಷ್ಟೋ ಬಾರಿ ಭೀಕರ ನೆರೆ ಬಂದಿದ್ದರೂ ಯಾವುದೇ ಹಾನಿಯಾಗಿರಲಿಲ್ಲ. ಆದರೆ, ಈಗ ಅಮೃತ-೨ ಯೋಜನೆಯ ಜಾಕ್ವೆಲ್ ನಿರ್ಮಿಸುವಾಗ ಇದರ ಪಕ್ಕದಲ್ಲೇ ಆಳವಾದ ಗುಂಡಿ ನಿರ್ಮಿಸಲು ಬ್ಲಾಸ್ಟಿಂಗ್ ಪ್ರಾರಂಭಿಸಿದರು. ಆ ಬ್ಲಾಸ್ಟಿಂಗ್ ಶಕ್ತಿಯಿಂದಾಗಿ ಈ ಎರಡು ಜಾಕ್ವೆಲ್ಗಳು ಉರುಳಿ ಬಿದ್ದಿವೆ. ಇದರಲ್ಲಿ 75 ಎಚ್ಪಿ ಸಾಮರ್ಥ್ಯದ ನಾಲ್ಕು ಪಂಪ್ಸೆಟ್ಗಳು ಹಾಗೂ ಜಾಕ್ವೆಲ್ ಕಟ್ಟಡ ಸಂಪೂರ್ಣ ನೆಲಸಮವಾಗಿದೆ,” ಎಂದು ಶಾಸಕರು ವಿವರಿಸಿದರು. ಇದನ್ನು ನಿರ್ಮಿಸಲು ರೈತರು ಸುಮಾರು ನಾಲ್ಕು ಕೋಟಿ ರೂಪಾಯಿ ವೆಚ್ಚ ಮಾಡಿದ್ದರು. ರೈತರಿಗೆ ಆಗಿರುವ ಈ ದೊಡ್ಡ ಮಟ್ಟದ ಹಾನಿಯ ಬಗ್ಗೆ ಅಮೃತ-೨ ಯೋಜನೆಯ ಅಭಿಯಂತರರು ಮತ್ತು ಗುತ್ತಿಗೆದಾರರು ಗಮನಹರಿಸದೆ ನಿರ್ಲಕ್ಷ್ಯ ಭಾವನೆ ತೋರುತ್ತಿದ್ದಾರೆ. ಇದರಿಂದ ಬೇಸತ್ತ ರೈತರು ಶಾಸಕರ ಬಳಿ ನ್ಯಾಯಕ್ಕಾಗಿ ಹೋದಾಗ ಈ ಸಂಧಾನ ಸಭೆಯನ್ನು ಆಯೋಜಿಸಲಾಗಿತ್ತು.

ನೀರಾವರಿ ಯೋಜನೆಯ ಹಿರಿಯ ಸಂಚಾಲಕರಾದ ನೇಮಿನಾಥ್ ನರಸಗೌಡರ ಮಾತನಾಡಿ, “ಇಲ್ಲಿನ ರೈತರು ಒಂದುಗೂಡಿ ನಿರ್ಮಿಸಿದ ನೀರಾವರಿ ಯೋಜನೆ ಅಮೃತ-೨ ಯೋಜನೆಯ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಉರುಳಿ ಬಿದ್ದಿದೆ. ಇದರಿಂದ ಈಗ ಸುಮಾರು 500 ರೈತ ಕುಟುಂಬಗಳು ಬೀದಿಪಾಲಾಗಿವೆ. ನೂರಾರು ಎಕರೆ ಭೂಪ್ರದೇಶದಲ್ಲಿ ಬೆಳೆದ ಕಬ್ಬು ಹಾಗೂ ಇನ್ನಿತರ ಬೆಳೆಗಳು ನೀರಿಲ್ಲದೆ ಕಮರಿ ಹೋಗಿ ಕೋಟ್ಯಂತರ ರೂಪಾಯಿ ಹಾನಿಯಾಗುವ ಭೀತಿ ಎದುರಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು, ಶೀಘ್ರದಲ್ಲೇ ಸಹಾಯ ಹಾಗೂ ಸಹಕಾರ ನೀಡಲೇಬೇಕು. ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ನಿನ್ನೆ ಗುರುವಾರದಂದು ಬೆಳಗಾವಿಗೆ ಆಗಮಿಸಿದ್ದಾಗ, ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ರೈತರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಲು ಆದೇಶಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಮಸ್ಯೆಗೆ ಜಿಲ್ಲಾಧಿಕಾರಿಗಳು ತಕ್ಷಣ ಸ್ಪಂದಿಸಬೇಕು,” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನೀರಾವರಿ ಯೋಜನೆಯ ಅಧ್ಯಕ್ಷ ರಾಜು ನಾಂದ್ರೆ, ಅಣ್ಣಾ ಅರವಾಡೆ, ಕುಂತಿನಾಥ್ ಮಾಲಗಾವೆ, ಅರುಣ್ ಎದಂಗೌಡರ್, ಬಾಬಾಸಾಹೇಬ್ ಸೌದತ್ತೆ, ಕುಮಾರ್ ಪಾಟೀಲ್, ರಾಜು ಮಾಲ್ಗಾವೆ, ಪ್ರಶಾಂತ್ ಎದಂಗೌಡರ್, ಶೀತಲ್ ಬುಜುಗೌಡರ್, ಸಂಜಯ್ ಪಾಟೀಲ್ ಹಾಗೂ ಯೋಜನೆಯ ಕಾರ್ಯದರ್ಶಿ ಇಲಾಯಿ ಕಡಕ್ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
