Belagavi

ಮಕ್ಕಳ ಭವಿಷ್ಯಕ್ಕಾಗಿ 9 ವರ್ಷಗಳ ಮುನಿಸು ಮರೆತು ಒಂದಾದ ದಂಪತಿ!!!

Share

ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದಾಗಿ ಕಳೆದ 9 ವರ್ಷಗಳಿಂದ ಪ್ರತ್ಯೇಕವಾಗಿದ್ದ ಬೆಳಗಾವಿಯ ದಂಪತಿಗಳು, ಮಕ್ಕಳ ಭವಿಷ್ಯಕ್ಕಾಗಿ ತಮ್ಮೆಲ್ಲಾ ವೈಷಮ್ಯಗಳನ್ನು ಮರೆತು ನ್ಯಾಯಾಲಯದ ಸಮ್ಮುಖದಲ್ಲಿ ಒಂದಾಗಿದ್ದಾರೆ. ಜಂಟಿ ಕುಟುಂಬದ ಸಣ್ಣಪುಟ್ಟ ಗೊಂದಲಗಳಿಂದಾಗಿ 2017ರಿಂದ ನ್ಯಾಯಾಲಯದ ಮೆಟ್ಟಿಲೇರಿದ್ದ ಈ ಪ್ರಕರಣವು, ನ್ಯಾಯಾಧೀಶರು ಹಾಗೂ ವಕೀಲರ ಸಕಾಲಿಕ ಮಾರ್ಗದರ್ಶನದಿಂದಾಗಿ ಇಂದು ಪರಸ್ಪರ ಒಪ್ಪಿಗೆಯೊಂದಿಗೆ ಸುಖಾಂತ್ಯ ಕಂಡಿದೆ.

ಜಂಟಿ ಕುಟುಂಬದಲ್ಲಿದ್ದ ಕಾರಣ ಉಂಟಾಗಿದ್ದ ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದಾಗಿ ಬೆಳಗಾವಿಯ ಪತಿ ಚನ್ನಗೌಡ ಹೊಸಮನಿ ಹಾಗೂ ಪತ್ನಿ ಆರತಿ ಹೊಸಮನಿ ಕಳೆದ ಒಂಬತ್ತು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. 2017 ರಿಂದ ಬೆಳಗಾವಿಯ 4ನೇ ಜೆ.ಎಂ.ಎಫ್.ಸಿ (JMFC) ನ್ಯಾಯಾಲಯದಲ್ಲಿ ಈ ಪ್ರಕರಣವು ಬಾಕಿ ಇತ್ತು. ಆದರೆ ಇಂದು ಮೊದಲನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಸುಭಾಷ ಸಂಕದ, 4ನೇ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಗೌರಮ್ಮಾ ಪಾಟೀಲ್, ಎರಡನೇ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಗಂಗಾಧರ ಕೆ. ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳಾದ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಅವರ ಸುದೀರ್ಘ ಮಾರ್ಗದರ್ಶನದಲ್ಲಿ ಈ ಮಹತ್ವದ ರಾಜಿ ಸಂಧಾನ ನಡೆದಿದ್ದು, ದಂಪತಿಗಳು ಸಹಖುಷಿಯಿಂದ ಹಾರ ಬದಲಾಯಿಸಿಕೊಂಡು ಒಟ್ಟಿಗೆ ಬಾಳಲು ನಿರ್ಧರಿಸಿದ್ದಾರೆ.

ಈ ದಂಪತಿಗೆ 7 ವರ್ಷದ ಗಂಡು ಮಗು ಹಾಗೂ 4 ವರ್ಷದ ಹೆಣ್ಣು ಮಗಳಿದ್ದಾಳೆ. ಗಂಡ-ಹೆಂಡತಿಯ ಜಗಳದಿಂದ ಮಕ್ಕಳ ಮನಸ್ಸಿನ ಮೇಲೆ ಮತ್ತು ಅವರ ಭವಿಷ್ಯದ ಮೇಲೆ ತೀವ್ರ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತ ಹೆತ್ತವರು, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಹಳೆಯ ಭಿನ್ನಾಭಿಪ್ರಾಯಗಳನ್ನು ಸಂಪೂರ್ಣವಾಗಿ ಮರೆತು ಒಂದಾಗಲು ಒಪ್ಪಿಕೊಂಡಿದ್ದಾರೆ. ಇನ್ನು ಈ ಸುದೀರ್ಘ ಕಾನೂನು ಹೋರಾಟದಲ್ಲಿ ಪ್ರತಿವಾದಿ ಪರ ವಕೀಲರಾದ ಮಂಜುನಾಥ್ ಎಲಿಬುರ್ಗಿ ಅವರು ದಂಪತಿಗಳನ್ನು ಒಂದು ಮಾಡುವಲ್ಲಿ ಮತ್ತು ರಾಜಿ ಸಂಧಾನ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು.

ನ್ಯಾಯಾಲಯದಿಂದ ಹೊರಬಂದ ಬಳಿಕ ಮಾತನಾಡಿದ ಪತಿ ಚನ್ನಗೌಡ, ನ್ಯಾಯಾಲಯ ಹಾಗೂ ವಕೀಲರ ಸೂಕ್ತ ಸಲಹೆಯಂತೆ ಒಂದಾಗಿ ಬಾಳಲು ಒಪ್ಪಿಕೊಂಡಿದ್ದೇವೆ ಎಂದರು. ಇನ್ನು ಪತ್ನಿ ಆರತಿ ಹೊಸಮನಿ ಮಾತನಾಡಿ, “ಗಂಡ-ಹೆಂಡತಿ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಇಬ್ಬರೂ ಒಟ್ಟಿಗೆ ಕುಳಿತು ಶಾಂತಚಿತ್ತದಿಂದ ಯೋಚಿಸಿದರೆ ಎಲ್ಲದಕ್ಕೂ ಪರಿಹಾರ ಸಿಗುತ್ತದೆ. ಸುಮ್ಮನೆ ಕೋರ್ಟ್‌ ಕಚೇರಿ ಎಂದು ಅಲೆಯುವ ಅಗತ್ಯವಿರುವುದಿಲ್ಲ. ದಂಪತಿಗಳ ಜಗಳ ಮಕ್ಕಳ ಮೇಲೆ ಪರಿಣಾಮ ಬೀರಬಾರದು, ಅದಕ್ಕಾಗಿಯೇ ನಾವು ಮಕ್ಕಳಿಗಾಗಿ ಎಲ್ಲವನ್ನೂ ಮರೆತು ಒಂದಾಗಿದ್ದೇವೆ” ಎಂದು ಇತರ ದಂಪತಿಗಳಿಗೂ ಮಾದರಿಯಾಗುವಂತಹ ಸಂದೇಶ ನೀಡಿದರು.

Tags:

error: Content is protected !!