ಸಮಾಜ ಸೇವೆ ಆಡಂಬರಕ್ಕೆ ಮಾಡುವುದಲ್ಲ. ತಾವು ದುಡಿದ ಹಣದಿಂದ ಸಮಾಜ ಸೇವೆ ಮಾಡುವ ಕೆಲಸ ಮದನಕುಮಾರ ಅವರು ಮಾಡುತ್ತಿರುವುದು ಶ್ಲಾಘನೀಯ ಎಂದು ಬಿಜೆಪಿ ಮುಖಂಡ ಶಂಕರಗೌಡ ಪಾಟೀಲ್ ಹೇಳಿದರು.


ಶನಿವಾರ ಮದನಕುಮಾರ ಫೌಂಡೇಶನ್ ವತಿಯಿಂದ ಬೆಳಗಾವಿ ಆಂಜನೇಯ ನಗರದ ಸರಕಾರಿ ಶಾಲೆಯ ಮಕ್ಕಳಿಗೆ ಪಠ್ಯ, ಪುಸ್ತಕಗಳನ್ನು ವಿತರಿಸಿ ಮಾತನಾಡಿದರು. ಸರಕಾರ ಎಲ್ಲ ರೀತಿಯಿಂದ ಶಾಲೆಗಳಿಗೆ ಸೌಲಭ್ಯ ಕೊಡಲು ಆಗುವುದಿಲ್ಲ. ಸಮಾಜ ಸೇವಕರು ಹಾಗೂ ಫೌಂಡೇಶನ್ ಸಹಾಯವನ್ನು ಸರಕಾರ ಬಯಸುತ್ತಿದೆ. ಆದ್ದರಿಂದ ಮದನಕುಮಾರ ಫೌಂಡೇಶನ್ ಗೆ ಆಂಜನೇಯ ನಗರದ ಸರಕಾರಿ ಶಾಲೆಯನ್ನು ದತ್ತು ಕೊಟ್ಟರೆ ಅಭಿವೃದ್ಧಿ ಮಾಡಲು ಸಹಾಯ ಮಾಡುತ್ತಾರೆ ಎಂದರು.
ಸಮಾಜಕ್ಕೆ ನಾಯಕರ ಅವಶ್ಯಕತೆ ಇಲ್ಲ. ಸಮಾಜ ಸೇವಕರ ಅವಶ್ಯಕತೆ ಇದೆ. ಶಿಕ್ಷಕರು ಎಂದಿಗೂ ರಾಜಕೀಯ ಮಾಡಬಾರದು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವುದರ ಜೊತೆಗೆ ದಾನಿಗಳಿಗೆ ಸರಕಾರದ ಶಾಲೆಗಳನ್ನು ದಾನಿಗಳ ಹಸ್ತಾಂತರ ಮಾಡಿದರೆ ಮಕ್ಕಳಿಗೆ ಸುಶಿಕ್ಷಿತ ಶಿಕ್ಷಣ ಕೊಡಲು ಸಾಧ್ಯವಾಗುತ್ತದೆ ಎಂದರು.
ನಾನು ಸ್ವತಃ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಬಂದಿದ್ದೇನೆ. ನಾನು ಬಯಸಿದ್ದರೇ ಖಾಸಗಿ ಶಾಲೆ ಆರಂಭಿಸಬಹುದಿತ್ತು. ಆದರೆ ಸರಕಾರಿ ಶಾಲೆಯನ್ನು ದತ್ತು ಪಡೆದು ಅದನ್ನು ಅಭಿವೃದ್ಧಿ ಮಾಡಿದ್ದೇನೆ ಎಂದರು.

ಮದನಕುಮಾರ ಬೈರಪ್ಪನವರ ಮಾತನಾಡಿ, ಬಡತನದಲ್ಲಿ ಜನಿಸುವುದು ತಪ್ಪಲ್ಲ. ಬಡವರಾಗಿ ಮೃತಪಡುವುದು ತಪ್ಪು. ನಾನು ಸಾಮಾನ್ಯ ರೈತ ಕುಟುಂಬದಿಂದ ಬಂದವನು. ಕಠಿಣ ಶ್ರಮದಿಂದ ಶಿಕ್ಷಣ ಪಡೆದು ಮನಷ್ಯತ್ವದಿಂದ ಬೆಳೆದು ವಿದ್ಯಾಭ್ಯಾಸ ಮಾಡಬೇಕು ಎಂದರು.
ಪೋಷಕರು ನಿಮ್ಮ ಕಷ್ಟಗಳನ್ನು ಮಕ್ಕಳ ಮೇಲೆ ಹಾಕುವುದು ಬೇಡ. ಸಾಧ್ಯವಾದಷ್ಟು ಗುಣಮಟ್ಟದ ಶಿಕ್ಷಣ ಕಲಿಸಿ ದೇಶಕ್ಕೆ ಉನ್ನತ ಮಟ್ಟದ ಅಧಿಕಾರಿಯನ್ನಾಗಿ ಮಾಡಿಸಿ ಸಮಾಜದ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಭಾಗ್ಯಶ್ರೀ ಬೈರಪ್ಪನವರ, ಸ್ಪೂರ್ತಿ ಭೈರಪ್ಪನವರ, ವೈ.ಜಿ.ಕುಂದರಗಿ, ಸುನೀಲ್ ದೇಶಪಾಂಡೆ, ಪ್ರವೀಣ್ ಬೈರಪ್ಪನವರ, ಸುಹಾಸ್ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
