hubbali

ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ನಿಯಮ ಸಡಿಲಿಸಲು ಕೇಂದ್ರಕ್ಕೆ ಮನವಿ: ಶಾಸಕ ಎನ್.ಎಚ್. ಕೋನರಡ್ಡಿ

Share

ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಅಡಿಯಲ್ಲಿ ಸಾಲ ಪಡೆಯದ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳುವ ವೇಳೆ ಕಡ್ಡಾಯವಾಗಿ ಸ್ವಯಂ ಘೋಷಣಾ ಪತ್ರ ಸಲ್ಲಿಸಬೇಕೆಂಬ ಹೊಸ ನಿಯಮವನ್ನು ಹಿಂಪಡೆದು, ಈ ಹಿಂದೆ ಜಾರಿಯಲ್ಲಿದ್ದ ಸರಳ ನೋಂದಣಿ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ನಿಯಮದಿಂದ ರಾಜ್ಯದ ಸಾವಿರಾರು ರೈತರಿಗೆ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಂದರೆಗಳು ಎದುರಾಗುತ್ತಿವೆ. ಬೆಳೆ ಬದಲಾವಣೆ, ಬ್ಯಾಂಕ್ ಸಾಲ, ಕೆಸಿಸಿ (KCC) ಸೇರಿದಂತೆ ಹಲವು ಪ್ರಕ್ರಿಯೆಗಳ ಕಾರಣದಿಂದ ರೈತರು ಗೊಂದಲಕ್ಕೀಡಾಗುತ್ತಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಹೊಸ ನಿರ್ದೇಶನದಂತೆ, ಸಾಲ ಪಡೆಯದ ರೈತರು ತಾವು ಪ್ರಸ್ತುತ ಹಂಗಾಮಿನಲ್ಲಿ ಯಾವುದೇ ಬ್ಯಾಂಕ್ ಅಥವಾ ಸಹಕಾರಿ ಸಂಸ್ಥೆಯಿಂದ ಕೃಷಿ ಬೆಳೆ ಸಾಲ ಅಥವಾ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಸಾಲ ಪಡೆದಿಲ್ಲ ಎಂಬ ಸ್ವಯಂ ಘೋಷಣೆ ಸಲ್ಲಿಸಬೇಕು. ಬಳಿಕ ಪರಿಶೀಲನೆಯಲ್ಲಿ ಮಾಹಿತಿ ತಪ್ಪಾಗಿದೆ ಎಂದು ಕಂಡುಬಂದರೆ ವಿಮಾ ಅರ್ಜಿ ತಿರಸ್ಕಾರ, ಪಾಲಿಸಿ ರದ್ದು ಹಾಗೂ ಪರಿಹಾರ ತಡೆಹಿಡಿಯುವ ಅಧಿಕಾರ ಸರ್ಕಾರ ಹಾಗೂ ವಿಮಾ ಕಂಪನಿಗಳಿಗೆ ಇರುತ್ತದೆ.

ಈ ನಿಯಮದಿಂದ ಗ್ರಾಮೀಣ ಪ್ರದೇಶದ ರೈತರಿಗೆ ಅನಗತ್ಯ ತೊಂದರೆ ಉಂಟಾಗಿದ್ದು, ಕಡ್ಡಾಯ ಘೋಷಣೆಯನ್ನು ಕೈಬಿಟ್ಟು ಹಿಂದಿನಂತೆಯೇ ಬೆಳೆ ವಿಮೆ ನೋಂದಣಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ. ಇದೇ ಬೇಡಿಕೆಯನ್ನು ಜುಲೈ 9ರಂದು ಬೆಳಗಾವಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿಗೆ ಜುಲೈ 15 ಕೊನೆಯ ದಿನಾಂಕವಾಗಿರುವುದರಿಂದ, ರೈತರ ಹಿತದೃಷ್ಟಿಯಿಂದ ತಕ್ಷಣವೇ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯ ನಿರ್ದೇಶನ ನೀಡಬೇಕು. ಅಗತ್ಯವಿದ್ದರೆ ನೋಂದಣಿ ಅವಧಿಯನ್ನೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಕೃಷಿ ಆಯುಕ್ತರು ಕೂಡ ಈ ಕುರಿತು ಪತ್ರ ಬರೆದಿದ್ದು, ಕೇಂದ್ರ ಸಚಿವರು ಹಾಗೂ ರಾಜ್ಯದ ಸಂಸದರ ಗಮನಕ್ಕೂ ವಿಷಯವನ್ನು ತರಲಾಗಿದೆ. ಮೌಖಿಕ ಭರವಸೆ ನೀಡುವುದರಿಂದ ಪ್ರಯೋಜನವಿಲ್ಲ; ಲಿಖಿತ ಆದೇಶದ ಮೂಲಕ ನಿಯಮದಲ್ಲಿ ಬದಲಾವಣೆ ತರಬೇಕು ಎಂದು ಅವರು ಹೇಳಿದರು.

ಬೆಳೆ ವಿಮೆ ಯೋಜನೆ ರೈತರಿಗೆ ರಕ್ಷಣೆ ನೀಡಬೇಕೇ ಹೊರತು ತಾಂತ್ರಿಕ ಅಡೆತಡೆ ಸೃಷ್ಟಿಸಬಾರದು. ವಿಮಾ ಕಂಪನಿಗಳಿಗೆ ಮಾತ್ರ ಲಾಭವಾಗುವ ಪರಿಸ್ಥಿತಿ ನಿರ್ಮಾಣವಾಗಬಾರದು. ಈ ವಿಷಯವನ್ನು ವಿಧಾನಸಭೆಯಲ್ಲೂ ಪ್ರಸ್ತಾಪಿಸಿದ್ದು, ರೈತರ ಪರವಾಗಿ ಹೋರಾಟ ಮುಂದುವರಿಸಲಾಗುವುದು ಎಂದು ಕೋನರಡ್ಡಿ ಸ್ಪಷ್ಟಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಕೋನರಡ್ಡಿ, ಈ ವಿಚಾರದ ಬಗ್ಗೆ ಸಾರ್ವಜನಿಕವಾಗಿ ಯಾರೂ ಅನಗತ್ಯ ಹೇಳಿಕೆ ನೀಡದಂತೆ ಪಕ್ಷದ ನಾಯಕತ್ವ ಸೂಚಿಸಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ದೆಹಲಿಯಲ್ಲಿ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.

ರಾಜ್ಯದಲ್ಲಿ ಇನ್ನೂ ಹಲವು ಖಾತೆಗಳಿಗೆ ಸಚಿವರ ನೇಮಕ ಅಗತ್ಯವಿದ್ದು, ಪಕ್ಷದ ಹೈಕಮಾಂಡ್ ಸೂಕ್ತ ಸಮಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಧಾರವಾಡ ಜಿಲ್ಲೆಗೆ ರೈತ ಕೋಟಾದಡಿ ಸೂಕ್ತ ಪ್ರಾತಿನಿಧ್ಯ ದೊರೆತರೆ ಜಿಲ್ಲೆಯ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

Tags:

error: Content is protected !!