:ದೇಶದಲ್ಲಿ ಸಂವಿಧಾನ ಬಾಹಿರವಾಗಿ ಅಕ್ರಮವಾಗಿ ಬೇರೆ ಬೇರೆ ದೇಶಗಳಿಂದ ಬಂದು ನೆಲೆಸಿರುವ ಜನರನ್ನು ಗುರುತಿಸಿ ಅವರನ್ನು ತಕ್ಷಣವೇ ಹೊರಹಾಕಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಆದರೆ ಕರ್ನಾಟಕ ಸರ್ಕಾರವು ಅಕ್ರಮ ವಲಸಿಗರಿಗೆ ಶಾಶ್ವತ ನಿವಾಸಿ ಪತ್ರ ನೀಡಲು ಅಧಿಸೂಚನೆ ಹೊರಡಿಸಲು ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮೃತ ಕುಲಕರ್ಣಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕೋಡಿ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ನಮ್ಮ ದೇಶದ ಸಂವಿಧಾನದ ಪ್ರಕಾರ ಯಾವುದೇ ವ್ಯಕ್ತಿಗೆ ಪೌರತ್ವ ಕೊಡುವ ಸಂಪೂರ್ಣ ಅಧಿಕಾರ ಇರುವುದು ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಸಂವಿಧಾನವನ್ನು ಗಾಳಿಗೆ ತೂರಿ, ಸಂಪೂರ್ಣ ಬಾಹೀರವಾಗಿ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರದ ಈ ಜನವಿರೋಧಿ ಧೋರಣೆಯನ್ನು ಚಿಕ್ಕೋಡಿ ಜಿಲ್ಲಾ ಬಿಜೆಪಿ ಘಟಕದಿಂದ ತೀವ್ರವಾಗಿ ವಿರೋಧಿಸಲಾಗುವುದು ಹಾಗೂ ಈ ಕುರಿತು ಕೇಂದ್ರ ಸರ್ಕಾರಕ್ಕೆ ಅಧಿಕೃತ ಮನವಿಯನ್ನು ಸಲ್ಲಿಸಲಾಗುವುದು ಎಂದು ಅಮೃತ ಕುಲಕರ್ಣಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಮಹೇಶ ಭಾತೆ ಅವರು, ಬೇರೆ ದೇಶಗಳಿಂದ ಬಂದು ಅಕ್ರಮವಾಗಿ ನಮ್ಮ ನೆಲದಲ್ಲಿ ನೆಲೆಸಿರುವ ವಲಸಿಗರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಯಾವುದೇ ಕಾರಣಕ್ಕೂ ಅಕ್ರಮ ವಲಸೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಮೇಶ ಕಾಳನ್ನವರ, ಶಿವಾನಂದ ನವಲಿಹಾಳೆ, ರಾಜು ಹರಗನ್ಮವರ, ಶಕುಂತಲಾ ಡೊಣವಾಡೆ, ಸಂಜೀವ ಪಾಟೀಲ, ಪವನ ಮಹಾಜನ, ಸಂಗಮೇಶ ದುರದುಂಡಿ ಸೇರಿದಂತೆ ಪಕ್ಷದ ಇನ್ನಿತರ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
