ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆಯ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗಿನ ಇಳಿಕೆ ಕಂಡುಬಂದಿದ್ದರೂ, ಕೃಷ್ಣಾ ನದಿ ಮತ್ತು ಅದರ ಉಪನದಿಗಳಿಗೆ ಹರಿದು ಬರುತ್ತಿರುವ ನೀರಿನ ವೇಗ ಮಾತ್ರ ಕಡಿಮೆಯಾಗಿಲ್ಲ. ಸದ್ಯ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಒಟ್ಟು 1 ಲಕ್ಷ 30 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಮುಂದುವರಿದಿದೆ.


ಮಹಾರಾಷ್ಟ್ರದ ಪ್ರಮುಖ ಜಲಾನಯನ ಪ್ರದೇಶಗಳಾದ ಕೊಯ್ನಾದಲ್ಲಿ 2 mm, ನವಜಾದಲ್ಲಿ 1 mm ಹಾಗೂ ಮಹಾಬಲೇಶ್ವರ ಭಾಗದಲ್ಲಿ 9 mm ನಷ್ಟು ಸಾಧಾರಣ ಮಳೆಯಾಗಿದೆ. ಇದರ ಪರಿಣಾಮವಾಗಿ ಕೃಷ್ಣಾ ನದಿಯ ಒಳಹರಿವಿನಲ್ಲಿ ಸ್ವಲ್ಪ ಪ್ರಮಾಣದ ಇಳಿಕೆ ಕಂಡುಬಂದಿದ್ದರೂ, ನದಿಗಳು ಮಾತ್ರ ಇನ್ನೂ ಅಪಾಯದ ಮಟ್ಟದಲ್ಲೇ ಹರಿಯುತ್ತಿವೆ.
ಪ್ರಸ್ತುತ ಕೃಷ್ಣಾ, ದೂದಗಂಗಾ ಮತ್ತು ವೇದಗಂಗಾ ನದಿಗಳು ಸಂಪೂರ್ಣವಾಗಿ ಮೈದುಂಬಿ ಹರಿಯುತ್ತಿವೆ. ನದಿಗಳ ಆರ್ಭಟಕ್ಕೆ ಚಿಕ್ಕೋಡಿ ವಿಭಾಗದ ಒಟ್ಟು 10 ಪ್ರಮುಖ ಸೇತುವೆಗಳು ಜಲಾವೃತಗೊಂಡಿವೆ. ಇದರಿಂದಾಗಿ ಈ ಭಾಗದ ಹಲವು ಹಳ್ಳಿಗಳ ನಡುವಿನ ನೇರ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ಪರದಾಡುವಂತಾಗಿದೆ. ಸದ್ಯ ಸಾರ್ವಜನಿಕರು ಕಡ್ಡಾಯವಾಗಿ ಪರ್ಯಾಯ ಮಾರ್ಗಗಳ ಮೂಲಕವೇ ತಮ್ಮ ಸಂಚಾರವನ್ನು ಮುಂದುವರಿಸಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಜಿಲ್ಲಾಡಳಿತವು ನದಿ ತೀರದ ಗ್ರಾಮಗಳಲ್ಲಿ ಹೈ ಅಲರ್ಟ್ ಜಾರಿಗೊಳಿಸಿದೆ.ಯಾವುದೇ ಕಾರಣಕ್ಕೂ ಸಾರ್ವಜನಿಕರು, ಯುವಕರು ಅಥವಾ ಜಾನುವಾರುಗಳು ನದಿಗೆ ಇಳಿಯಬಾರದು. ಸೆಲ್ಫಿ ತೆಗೆದುಕೊಳ್ಳುವುದು ಅಥವಾ ನೀರಿನಲ್ಲಿ ಸಾಹಸ ಮಾಡಲು ಮುಂದಾಗಬಾರದು. ಪ್ರವಾಹದ ಪರಿಸ್ಥಿತಿ ಮುಗಿಯುವವರೆಗೆ ಪ್ರತಿಯೊಬ್ಬರೂ ಜಿಲ್ಲಾಡಳಿತದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
