ಉಗಾರ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆ ತಮ್ಮ ದೂರದೃಷ್ಟಿ, ಆಧುನಿಕ ಚಿಂತನೆ ಹಾಗೂ ಶಿಸ್ತುಬದ್ಧ ಆಡಳಿತದ ಮೂಲಕ ಹೊಸ ಆಯಾಮ ನೀಡಿದ ರಾಜಾಭಾವು ಶಿರಗಾಂವ್ಕರ್ ಅವರು ಭಾರತೀಯ ಸಕ್ಕರೆ ಉದ್ಯಮದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ನೀತಾ ಕೇಳಕರ ಹೇಳಿದರು.


ಬುಧವಾರ ಸಂಜೆ ಉಗಾರದ ವಿಹಾರ ಸಭಾಭವನದಲ್ಲಿ ಶಿರಗಾಂವ್ಕರ್ ಕುಟುಂಬದವರು ಹಾಗೂ ಉಗಾರ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಚಂದನ್ ಶಿರಗಾಂವ್ಕರ್ ಅವರ ಮುಖ್ಯ ಉಪಸ್ಥಿತಿಯಲ್ಲಿ ನಡೆದ ಶೋಕಸಭೆಯಲ್ಲಿ ರೈತರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಸಾರ್ವಜನಿಕರು ಭಾಗವಹಿಸಿ ರಾಜಾಭಾವು ಶಿರಗಾಂವ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿತಾ ಕೇಳಕರ, ರಾಜಾಭಾವು ಶಿರಗಾಂವ್ಕರ್ ಅವರು ಉಗಾರ ಸಕ್ಕರೆ ಕಾರ್ಖಾನೆಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ರೈತರು, ಕಾರ್ಮಿಕರು ಹಾಗೂ ಅನೇಕ ಶಿಕ್ಷಣ ಸಂಸ್ಥೆಗಳಿಗೆ ನಿರಂತರ ನೆರವು ನೀಡಿದ್ದರು. ಅವರು ಉಗಾರ ಲಯನ್ಸ್ ಕ್ಲಬ್ನ ಸಂಸ್ಥಾಪಕರಾಗಿದ್ದು, ಸಾಂಗ್ಲಿಯ ನೂತನ ಬುದ್ಧಿಬಲ ಸಂಸ್ಥೆಯ ಸ್ಥಾಪಕರಾಗಿ ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದರು ಎಂದು ಹೇಳಿದರು.
ರಾಜಾಭಾವು ಶಿರಗಾಂವ್ಕರ್ ಅವರ ನಾಯಕತ್ವದಲ್ಲಿ ಉಗಾರ ಸಕ್ಕರೆ ಕಾರ್ಖಾನೆ ಸಕ್ಕರೆ ಉತ್ಪಾದನೆಗೆ ಮಾತ್ರ ಸೀಮಿತವಾಗದೆ, ವಿದ್ಯುತ್ ಸಹಉತ್ಪಾದನೆ, ಎಥೆನಾಲ್ ನಿರ್ಮಾಣ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಕೆಯಲ್ಲಿ ದೇಶದ ಪ್ರಮುಖ ಕಾರ್ಖಾನೆಗಳ ಸಾಲಿನಲ್ಲಿ ಗುರುತಿಸಿಕೊಂಡಿತು. ಅವರ ದೂರದೃಷ್ಟಿಯಿಂದ ಉಗಾರ ಸಕ್ಕರೆ ಕಾರ್ಖಾನೆಯ ಕೀರ್ತಿ ರಾಜ್ಯದ ಗಡಿಗಳನ್ನು ದಾಟಿ ರಾಷ್ಟ್ರಮಟ್ಟದಲ್ಲಿ ಬೆಳಗಿತು ಎಂದು ಸಭೆಯಲ್ಲಿ ಮಾತನಾಡಿದ ಗಣ್ಯರು ಸ್ಮರಿಸಿದರು.
ರೈತರ ಹಿತಾಸಕ್ತಿ, ಕಾರ್ಮಿಕರ ಕಲ್ಯಾಣ ಹಾಗೂ ಉದ್ಯಮದ ಸರ್ವಾಂಗೀಣ ಅಭಿವೃದ್ಧಿಗೆ ಅವರು ನೀಡಿದ ಆದ್ಯತೆ ಇಂದಿಗೂ ಮಾದರಿಯಾಗಿದೆ. ಅವರ ಅಗಲಿಕೆಯಿಂದ ಸಕ್ಕರೆ ಉದ್ಯಮ ಒಬ್ಬ ಅನುಭವಿ ಮಾರ್ಗದರ್ಶಿಯನ್ನು ಕಳೆದುಕೊಂಡಂತಾಗಿದೆ. ಅವರು ಹಾಕಿಕೊಟ್ಟ ಅಭಿವೃದ್ಧಿಯ ಹೆಜ್ಜೆಗುರುತುಗಳು ಹಾಗೂ ಮಾನವೀಯ ಮೌಲ್ಯಗಳು ಮುಂದಿನ ಪೀಳಿಗೆಗೆ ಸದಾ ಸ್ಫೂರ್ತಿದಾಯಕವಾಗಿರಲಿವೆ ಎಂದು ರೈತ ಮುಖಂಡ ವೀರಭದ್ರ ಕಟಗೇರಿ, ರಾಮಚಂದ್ರ ಥೊರಶೆ, ಬಿಬಿಎ ಶಿಕ್ಷಣ ಸಂಸ್ಥೆಯ ಪ್ರಮುಖ ರಾಮಚಂದ್ರ ಕಿಲ್ಲೇದಾರ, ಶಿರಗಾಂವ್ಕರ್ ಮಹಾವಿದ್ಯಾಲಯದ ಪ್ರಾಚಾರ್ಯೆ ಮೇಘನಾ ಕುಲಕರ್ಣಿ, ವಿನಾಯಕ್ ಕಾಂಬಳೆ, ಬಾಳಾಸಾಹೇಬ್ ವಿಸಾಪುರೆ, ಬಿ.ಎನ್. ಜೋಶಿ, ನ್ಯಾಯವಾದಿ ರಾಹುಲ್ ಕಟಗೇರಿ, ಜಗದೀಶ್ ಪಟವರ್ಧನ್, ಶ್ರೀಹರಿ ವಿದ್ಯಾಲಯದ ಮುಖ್ಯೋಪಾಧ್ಯಾಯ ಸಿದ್ದರಾಮ ಮೋಟಗಿ, ಅಣ್ಣಪ್ಪ ಮಾಳಿ ಸೇರಿದಂತೆ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಗಣ್ಯರು ಹಾಗೂ ರೈತ ಮುಖಂಡರು ರಾಜಾಭಾವು ಶಿರಗಾಂವ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
