ಈ ವರ್ಷದ ಮುಂಗಾರು ಸುಮಾರು ಒಂದು ತಿಂಗಳು ತಡವಾಗಿ ಆರಂಭಗೊಂಡಿದ್ದರೂ, ಕೆಲವೇ ದಿನಗಳಲ್ಲಿ ಪ್ರಕೃತಿಯ ಚಿತ್ರಣ ಸಂಪೂರ್ಣ ಬದಲಾಗಿದೆ.

ಇದೇ ಜುಲೈ 2ರಂದು ಕೃಷ್ಣಾ ನದಿಯಲ್ಲಿ ನೀರಿನ ಹನಿ ಕೂಡ ಇರಲಿಲ್ಲ. ಆದರೆ ಇಂದು (ಜುಲೈ 5) ನದಿಯಲ್ಲಿ ಸುಮಾರು 17 ಅಡಿ ಎತ್ತರದಲ್ಲಿ ನೀರು ಹರಿಯುತ್ತಿದ್ದು, ಉಗಾರ ಸಕ್ಕರೆ ಕಾರ್ಖಾನೆಯ ಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿದೆ. ಬ್ಯಾರೇಜ್ ಮೇಲಿಂದ ಸುಮಾರು 7 ಅಡಿ ಎತ್ತರದಲ್ಲಿ ನೀರು ಹರಿಯುತ್ತಿರುವ ದೃಶ್ಯ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಜೂನ್ ತಿಂಗಳಿನಲ್ಲಿ ಸಮರ್ಪಕ ಮಳೆಯಾಗದ ಕಾರಣ ರೈತರು ಬಿತ್ತನೆ ಕಾರ್ಯವನ್ನು ಮುಂದೂಡಿದ್ದರು. ಕೆಲವರು ಬಿತ್ತನೆ ಮಾಡಿದ ಬೆಳೆಗಳೂ ನೀರಿನ ಕೊರತೆಯಿಂದ ಒಣಗುವ ಸ್ಥಿತಿಗೆ ತಲುಪಿದ್ದವು. ಆದರೆ ಜುಲೈ ಆರಂಭವಾದ ಬಳಿಕ ಕೇವಲ ನಾಲ್ಕು ದಿನಗಳಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಇತ್ತೀಚೆಗೆ ಬತ್ತಿಹೋಗಿದ್ದ ಕೃಷ್ಣಾ ನದಿ ಈಗ ತುಂಬಿ ಹರಿಯುತ್ತಿರುವುದನ್ನು ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ರಾಜಾಪುರ ಬ್ಯಾರೇಜ್ ಮೂಲಕ ಕರ್ನಾಟಕದತ್ತ ಸುಮಾರು 53 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಇದೇ ನೀರು ಕೃಷ್ಣಾ ನದಿಯ ನೀರಿನ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸಿದೆ.
ಕಾಗವಾಡ ತಾಲೂಕಿನಲ್ಲಿ ಇನ್ನೂ ಅಲ್ಪ ಪ್ರಮಾಣದ ಮಳೆಯಾಗಿದ್ದರೂ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಐನಾಪುರ ಏತ ನೀರಾವರಿ ಯೋಜನೆಯನ್ನು ಕೂಡಲೇ ಆರಂಭಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಐನಾಪುರ ಏತ ನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿ ಸುಮಾರು 27 ಸಾವಿರ ಏಕರೆ ಕೃಷಿ ಪ್ರದೇಶ ಬರುತ್ತಿದ್ದು, ಯೋಜನೆ ಆರಂಭವಾದರೆ ರೈತರಿಗೆ ಬಿತ್ತನೆ ಹಾಗೂ ಬೆಳೆ ಬೆಳೆಯಲು ಅನುಕೂಲವಾಗಲಿದೆ. ಆದ್ದರಿಂದ ಜಿಲ್ಲೆಯ ಸಚಿವರು, ಶಾಸಕರು ಹಾಗೂ ಸಂಬಂಧಿಸಿದ ಹಿರಿಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಯೋಜನೆಯನ್ನು ಆರಂಭಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ.
