ಉಗಾರ ಸಕ್ಕರೆ ಕಾರ್ಖಾನೆಯ ಮಾಲೀಕರು, ಹಿರಿಯ ಸಕ್ಕರೆ ಉದ್ಯಮಿ ಹಾಗೂ ಸಮಾಜಸೇವಕರಾದ ರಾಜಾಭಾವು ಶಿರಗಾಂವ್ಕರ್ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಪಾರ್ಥಿವ ಶರೀರವನ್ನು ಉಗಾರ ಸಕ್ಕರೆ ಕಾರ್ಖಾನೆಯ ಮುಖ್ಯ ದ್ವಾರದ ಮೂಲಕ ಅಂತಿಮ ದರ್ಶನಕ್ಕೆ ಕರೆದೊಯ್ಯಲಾಯಿತು. ಈ ವೇಳೆ ಕಾರ್ಮಿಕರು, ರೈತರು ಹಾಗೂ ಸಾವಿರಾರು ಅಭಿಮಾನಿಗಳು ಭಾವಪೂರ್ಣವಾಗಿ ಅಂತಿಮ ನಮನ ಸಲ್ಲಿಸಿದರು.
೯೧ ವರ್ಷದ ರಾಜಾಭಾವು ಶಿರಗಾಂವ್ಕರ್ ಅವರು ಗುರುವಾರ ಬೆಳಿಗ್ಗೆ ನಿಧನ ಹೊಂದಿದ್ದರು. ಅವರ ಪಾರ್ಥಿವ ಶರೀರವನ್ನು ಉಗಾರದಲ್ಲಿರುವ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಕುಟುಂಬದ ಸದಸ್ಯರು, ವಿವಿಧ ಮಠಗಳ ಸ್ವಾಮೀಜಿಗಳು, ರಾಜಕೀಯ ಮುಖಂಡರು, ಗಣ್ಯರು, ಕಾರ್ಖಾನೆಯ ಅಧಿಕಾರಿಗಳು, ಕಾರ್ಮಿಕರು ಹಾಗೂ ರೈತರು ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಿದರು.


ದೇಶದ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪನೆಯಾದ ಉಗಾರ ಸಕ್ಕರೆ ಕಾರ್ಖಾನೆ ಕಳೆದ ಹಲವು ದಶಕಗಳಿಂದ ಈ ಭಾಗದ ರೈತರು ಹಾಗೂ ಕಾರ್ಮಿಕರ ಬದುಕಿಗೆ ಆಸರೆಯಾಗಿದ್ದು, ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದ ಕಬ್ಬು ಬೆಳೆಗಾರರ ಆರ್ಥಿಕ ಪ್ರಗತಿಗೆ ಮಹತ್ತರ ಕೊಡುಗೆ ನೀಡಿದೆ. ರಾಜಾಭಾವು ಶಿರಗಾಂವ್ಕರ್ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕಾರ್ಖಾನೆ ಬೆಳವಣಿಗೆಯ ಹೊಸ ಎತ್ತರಗಳನ್ನು ತಲುಪಿತ್ತು.
ವಿಜಯಪುರದ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ಶಿವಾನಂದ ಮಹಾವಿದ್ಯಾಲಯದ ಏಕನ್ಯಾಸಧಾರಿ ಡಾ. ಪ.ಪೂ. ಶ್ರೀ ಶ್ರದ್ಧಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಶ್ರದ್ಧಾಂಜಲಿ ಸಲ್ಲಿಸಿ, ರಾಜಾಭಾವು ಶಿರಗಾಂವ್ಕರ್ ಅವರು ಈ ಭಾಗದ ಅನೇಕ ಮಠ-ಮಂದಿರಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಮಾಜಮುಖಿ ಕಾರ್ಯಗಳಿಗೆ ಸದಾ ಬೆಂಬಲವಾಗಿ ನಿಂತಿದ್ದ ದಾನಿಗಳಾಗಿದ್ದರು. ಅವರ ನಿಧನದಿಂದ ಸಮಾಜಕ್ಕೆ ಅಪಾರ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.

ಮಾಜಿ ಸಚಿವ ಶ್ರೀಮಂತ ಪಾಟೀಲ, ಮಾಜಿ ಶಾಸಕ ಮೋಹನರಾವ್ ಶಹಾ, ಶಹಜಹಾನ್ ಡೂಂಗಾರಗಾವ್, ಕನ್ನಡ ಯುವಕ ಸಂಘದ ಅಧ್ಯಕ್ಷ ಸಿದ್ದಗೌಡ ಕಾಗೆ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು. ಉಗಾರ ಲಯನ್ಸ್ ಕ್ಲಬ್ನ ಅಧ್ಯಕ್ಷ ಡಾ. ಮೋಹನ್ ಕಟಗೇರಿ ಹಾಗೂ ಸದಸ್ಯರು ತಮ್ಮ ಸಂಸ್ಥಾಪಕರಿಗೆ ಅಂತಿಮ ನಮನ ಅರ್ಪಿಸಿದರು.
ರಾಜಾಭಾವು ಶಿರಗಾಂವ್ಕರ್ ಅವರ ಬಂಧುಗಳಾದ ಪ್ರಫುಲ್ ಶಿರಗಾಂವ್ಕರ್, ಸುಶಿರ್ ಶಿರಗಾಂವ್ಕರ್, ಪುತ್ರ ಸಚಿನ್ ಶಿರಗಾಂವ್ಕರ್, ಮಹಿಳಾ ಮಂಡಳಿಯ ಮಾಜಿ ಅಧ್ಯಕ್ಷೆ ಸ್ಮಿತಾತಾಯಿ ಶಿರಗಾಂವ್ಕರ್, ರಾಧಿಕಾತಾಯಿ ಶಿರಗಾಂವ್ಕರ್, ಉಗಾರ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಚಂದನ್ ಶಿರಗಾಂವ್ಕರ್, ರೋಹನ್ ಶಿರಗಾಂವ್ಕರ್ ಹಾಗೂ ಅವಿನಾಶ್ ಶಿರಗಾಂವ್ಕರ್ ಸೇರಿದಂತೆ ಕುಟುಂಬದ ಸದಸ್ಯರು ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದರು.
ಅಂತಿಮ ಯಾತ್ರೆಯ ಸಂದರ್ಭದಲ್ಲಿ ಕಾರ್ಖಾನೆಯ ಅನೇಕ ಕಾರ್ಮಿಕರು ಕಣ್ಣೀರು ಹಾಕುತ್ತಾ ತಮ್ಮ ಪ್ರೀತಿಯ ಮಾಲೀಕರೊಂದಿಗಿನ ನೆನಪುಗಳನ್ನು ಹಂಚಿಕೊಂಡರು. ಬಳಿಕ ರಾಜಾಭಾವು ಶಿರಗಾಂವ್ಕರ್ ಅವರ ಪುತ್ರ ಸಚಿನ್ ಶಿರಗಾಂವ್ಕರ್ ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಪಾರ್ಥಿವ ಶರೀರವನ್ನು ಕಾರ್ಖಾನೆಯ ಮುಖ್ಯ ದ್ವಾರದಿಂದ ಉಗಾರದ ರುದ್ರಭೂಮಿಗೆ ಅಂತಿಮ ಯಾತ್ರೆ ಮೂಲಕ ಕೊಂಡೊಯ್ಯಲಾಯಿತು. ಸಾವಿರಾರು ಅಭಿಮಾನಿಗಳು ಹಾಗೂ ಸಾರ್ವಜನಿಕರು ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದರು. ಬಳಿಕ ಪುತ್ರ ಸಚಿನ್ ಶಿರಗಾಂವ್ಕರ್ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ವರದಿ: ಸುಕುಮಾರ್ ಬನ್ನೂರೆ, IN ನ್ಯೂಸ್ ಕಾಗವಾಡ
