ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಜಾರಿಯಲ್ಲಿರುವ ಅಕ್ಷರ ದಾಸೋಹ (ಮಧ್ಯಾಹ್ನದ ಬಿಸಿಯೂಟ) ಯೋಜನೆ ವಿದ್ಯಾರ್ಥಿಗಳ ಆರೋಗ್ಯ, ಪೌಷ್ಟಿಕತೆ ಹಾಗೂ ಶೈಕ್ಷಣಿಕ ಪ್ರಗತಿಗೆ ಅತ್ಯುತ್ತಮವಾಗಿ ಸಹಕಾರಿಯಾಗಿದ್ದು, ಶಾಲಾ ಹಾಜರಾತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮಧ್ಯಾಹ್ನ ಉಪಾಹಾರ ಯೋಜನೆಯ ಶಿಕ್ಷಣಾಧಿಕಾರಿ ರಾಜೇಂದ್ರ ತೇರದಾಳೆ ಹೇಳಿದರು.

ಮಂಗಳವಾರ ಕಾಗವಾಡ ತಾಲೂಕಿನ ಶೇಡಬಾಳದ ಸನ್ಮತಿ ಶಿಕ್ಷಣ ಸಮಿತಿಯ ಸನ್ಮತಿ ವಿದ್ಯಾಲಯದಲ್ಲಿ ಅಕ್ಷರ ದಾಸೋಹ ಯೋಜನೆ ಕುರಿತು ಇನ್ ವಾಹಿನಿಗೆ ಮಾಹಿತಿ ನೀಡಿದ ಅವರು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯ ಎಂಟು ಶೈಕ್ಷಣಿಕ ವಲಯಗಳ ೨,೨೩೩ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ೩,೨೦,೫೭೨ ವಿದ್ಯಾರ್ಥಿಗಳಿಗೆ ನಿರಂತರವಾಗಿ ಮಧ್ಯಾಹ್ನದ ಬಿಸಿಯೂಟ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಶಿಕ್ಷಣ ಮತ್ತು ಪೌಷ್ಟಿಕಾಂಶ ಎರಡೂ ಮಕ್ಕಳ ಭವಿಷ್ಯ ರೂಪಿಸುವ ಪ್ರಮುಖ ಅಂಶಗಳಾಗಿವೆ. ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು ಹಸಿವಿನ ಕಾರಣದಿಂದ ಶಾಲೆಯಿಂದ ದೂರ ಉಳಿಯುತ್ತಿದ್ದ ಸಂದರ್ಭದಲ್ಲೇ ಸರ್ಕಾರ ಜಾರಿಗೆ ತಂದ ಅಕ್ಷರ ದಾಸೋಹ ಯೋಜನೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದಿದೆ ಎಂದು ಹೇಳಿದರು.
ಅಕ್ಷರ ದಾಸೋಹ ಯೋಜನೆ ಕೇವಲ ಮಧ್ಯಾಹ್ನದ ಊಟ ನೀಡುವ ಕಾರ್ಯಕ್ರಮವಲ್ಲ. ಇದು ಮಕ್ಕಳ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಸಮಾನತೆಯನ್ನು ಬೆಳೆಸುವ ಒಂದು ಸಾಮಾಜಿಕ ಚಳವಳಿಯಾಗಿದೆ. ಶಾಲೆಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಪೌಷ್ಟಿಕ ಆಹಾರ ದೊರೆಯಬೇಕು ಎಂಬ ಉದ್ದೇಶದಿಂದ ಆರಂಭವಾದ ಯೋಜನೆ ಇಂದು ಲಕ್ಷಾಂತರ ಮಕ್ಕಳ ಜೀವನದಲ್ಲಿ ಆಶಾಕಿರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಿಂದೆ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಬಡ ಕುಟುಂಬಗಳ ಮಕ್ಕಳು ಹೊಟ್ಟೆ ತುಂಬ ಊಟವಿಲ್ಲದೆ ಶಾಲೆಗೆ ಬರುತ್ತಿದ್ದರು. ಕೆಲವರು ಮಧ್ಯಾಹ್ನದ ವೇಳೆಗೆ ಮನೆಗೆ ತೆರಳಿ ಮತ್ತೆ ಶಾಲೆಗೆ ಮರಳುತ್ತಿರಲಿಲ್ಲ. ಆದರೆ ಅಕ್ಷರ ದಾಸೋಹ ಯೋಜನೆ ಜಾರಿಗೆ ಬಂದ ಬಳಿಕ ಶಾಲಾ ಹಾಜರಾತಿಯಲ್ಲಿ ಗಣನೀಯ ಏರಿಕೆ ಕಂಡುಬAದಿದ್ದು, ಶಾಲೆ ಬಿಟ್ಟು ಹೋಗುವ ಮಕ್ಕಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ತಿಳಿಸಿದರು.
ಎಲ್ಲ ವರ್ಗದ ಮಕ್ಕಳು ಒಂದೇ ಸಾಲಿನಲ್ಲಿ ಕುಳಿತು ಊಟ ಮಾಡುವ ಮೂಲಕ ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆಯ ಮೌಲ್ಯಗಳನ್ನು ಕಲಿಯುತ್ತಿದ್ದಾರೆ. ಜಾತಿ, ಧರ್ಮ ಹಾಗೂ ಆರ್ಥಿಕ ಭೇದಭಾವಗಳನ್ನು ಮೀರಿ ಮಕ್ಕಳು ಒಟ್ಟಾಗಿ ಊಟ ಮಾಡುವ ದೃಶ್ಯಗಳು ಸಮಾಜದಲ್ಲಿ ಸೌಹಾರ್ದತೆಯ ಸಂದೇಶ ಸಾರುತ್ತಿವೆ ಎಂದು ಹೇಳಿದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಂಟು ವಲಯಗಳಲ್ಲಿ ಕಾಗವಾಡ – ೧೫,೨೮೮, ಅಥಣಿ – ೪೪,೬೧೯, ರಾಯಬಾಗ – ೫೪,೪೧೮, ಚಿಕ್ಕೋಡಿ – ೪೧,೬೪೪, ನಿಪ್ಪಾಣಿ – ೨೬,೪೦೪, ಗೋಕಾಕ್ – ೩೩,೭೪೩, ಮೂಡಲಗಿ – ೫೪,೪೦೨ ಹಾಗೂ ಹುಕ್ಕೇರಿ – ೪೪,೦೧೧ ವಿದ್ಯಾರ್ಥಿಗಳು ಅಕ್ಷರ ದಾಸೋಹ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಕ್ಷೀರಭಾಗ್ಯ ಯೋಜನೆ ಅಡಿ ಹಾಲು, ಮೊಟ್ಟೆ, ಅನ್ನ, ಬೇಳೆ, ತರಕಾರಿ ಸೇರಿದಂತೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದ್ದು, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಇದು ಪೂರಕವಾಗಿದೆ. ಅಪೌಷ್ಟಿಕತೆಯನ್ನು ಕಡಿಮೆ ಮಾಡುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಸನ್ಮತಿ ಶಿಕ್ಷಣ ಸಮಿತಿಯ ಸನ್ಮತಿ ವಿದ್ಯಾಲಯದಲ್ಲಿ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಕಲ್ಪಿಸಿರುವುದರಿಂದ ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ದಾಖಲಾಗಿದೆ. ಅಲ್ಲದೆ ವಿದ್ಯಾರ್ಥಿ ಸಂತೋಷ ರತ್ನಾಪಗೋಳ ೬೨೩ ಅಂಕಗಳನ್ನು ಪಡೆದು ರಾಜ್ಯದಲ್ಲಿ ದ್ವಿತೀಯ ಸ್ಥಾನ ಗಳಿಸಿರುವುದು ಸಂಸ್ಥೆಯ ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಎಂ.ಎನ್. ಕಾಳೆನಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಕಾಗವಾಡ-ಅಥಣಿ ತಾಲೂಕಿನ ಪ್ರದಾಣಿ ಮಂತ್ರಿ ಪೋಷಣ ಆಹಾರ ಸಹಾಯಕ ನಿದೇರ್ಶಕ ಮಲ್ಲಿಕಾರ್ಜುನ್ ನಾಮದಾರ, ಶಿಕ್ಷಕರಾದ ಎಸ್.ಬಿ. ಇರಾಜ್, ಎಂ.ಕೆ. ಕಾಂಬಳೆ, ಎಸ್.ಡಿ. ಮುತಾಲಿಕ್, ಎಚ್.ಪಿ. ನಾಯಿಕ್, ಎಂ.ಎಸ್. ಸಪ್ತಸಾಗರ, ಜಿ.ಎನ್. ಹೆಬ್ಬಾಳೆ, ಎಸ್.ಎಸ್. ಭಂಡಾರೆ, ಎಂ.ಎಸ್. ಮುತವಲ್ಲಿ, ಎ.ಎಸ್. ಕುರಾಡೆ, ಆರ್.ಜಿ. ಮಾಂಗುರೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುಕುಮಾರ್ ಬನ್ನೂರೆ
ಇನ್ನ ನ್ಯೂಸ್ ಕಾಗವಾಡ
