ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಕಾಗವಾಡ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಹಾಗೂ ಸಂಘ-ಸಂಸ್ಥೆಗಳಲ್ಲಿ ಯೋಗಾಭ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯೋಗದ ಮಹತ್ವವನ್ನು ಸಾರಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಯೋಗ ತಜ್ಞ ಹಾಗೂ ಶಿರುಗುಪ್ಪಿ ಗ್ರಾಮದ ವೈದ್ಯರಾದ ಡಾ. ಎಂ.ಎನ್. ಭೂಮಾಜ ಅವರು, “ಯೋಗ ಗುರು ಸೌರಭ್ ಬೋತ್ರಾ ಅವರು ಐಐಟಿ-ಬಿಎಚ್ಯು ಪದವೀಧರರಾಗಿದ್ದು, ನಂತರ ಯೋಗ ಶಿಕ್ಷಕರಾಗಿ ಹಾಗೂ ಆರೋಗ್ಯ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ಸ್ಥಾಪಿಸಿರುವ ‘Habuild’ ಸಂಸ್ಥೆಯ ಮೂಲಕ ‘Yoga Everyday’ ಎಂಬ ಆನ್ಲೈನ್ ಯೋಗ ಅಭಿಯಾನವನ್ನು ಆರಂಭಿಸಿದ್ದು, ಪ್ರತಿದಿನ ಯೋಗವನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳುವ ಸಂದೇಶವನ್ನು ನೀಡುತ್ತಿದ್ದಾರೆ” ಎಂದು ಹೇಳಿದರು.

“ಈ ಕಾರ್ಯಕ್ರಮದ ಮೂಲಕ ಪ್ರತಿದಿನ ೪೫ ನಿಮಿಷಗಳ ಯೋಗಾಭ್ಯಾಸವನ್ನು ಜನರಿಗೆ ತಲುಪಿಸಲಾಗುತ್ತಿದ್ದು, ಭಾರತ ಸೇರಿದಂತೆ ಅನೇಕ ದೇಶಗಳ ಲಕ್ಷಾಂತರ ಜನರು ಇದರ ಭಾಗವಾಗಿದ್ದಾರೆ. ಯೋಗವನ್ನು ಮನೆಮನೆಗೆ ತಲುಪಿಸುವಲ್ಲಿ ಈ ಸಂಸ್ಥೆ ಮಹತ್ವದ ಪಾತ್ರ ವಹಿಸಿದ್ದು, ವಿಶ್ವದಾಖಲೆ ನಿರ್ಮಿಸುವ ಮೂಲಕ ವಿಶೇಷ ಗುರುತನ್ನೂ ಪಡೆದಿದೆ” ಎಂದು ಅವರು ತಿಳಿಸಿದರು. ಡಾ. ಭೂಮಾಜ ಅವರು ನಿರಂತರವಾಗಿ ಯೋಗಾಭ್ಯಾಸ ಮಾಡುತ್ತಿದ್ದು, ಅವರ ತಂದೆ ದಿವಂಗತ ಡಾ. ನೇಮಿನಾಥ್ ಭೂಮಾಜ ಕೂಡ ಯೋಗಾಭ್ಯಾಸದಲ್ಲಿ ಪರಿಣತರಾಗಿದ್ದರು. ಅವರು ಅನೇಕ ಜನರಿಗೆ ಯೋಗದ ಮಹತ್ವವನ್ನು ತಿಳಿಸಿ, ಯೋಗಾಭ್ಯಾಸಿಗಳನ್ನಾಗಿ ರೂಪಿಸುವ ಕಾರ್ಯ ಮಾಡಿದ್ದರು ಎಂದು ಈ ವೇಳೆ ಸ್ಮರಿಸಿದರು.

ಶಿರುಗುಪ್ಪಿ ಗ್ರಾಮದ ಶ್ರೀ ವಿದ್ಯಾಸಾಗರ ಆಂಗ್ಲ ಮಾಧ್ಯಮ ಸಂಸ್ಥೆಯ ಅಧ್ಯಕ್ಷ ಉದಯರಾಜ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯ ಎಸ್.ಎಸ್. ವಂಟಗುಡೆ ಮಾತನಾಡಿ, “ಭಾರತದ ಪ್ರಸ್ತಾವನೆಯ ಮೇರೆಗೆ ಸಂಯುಕ್ತ ರಾಷ್ಟ್ರ ಸಂಸ್ಥೆಯು ೨೦1೪ರಲ್ಲಿ ಜೂನ್ ೨೧ ಅನ್ನು ಅಂತರರಾಷ್ಟ್ರೀಯ ಯೋಗ ದಿನವಾಗಿ ಘೋಷಿಸಿತು. ೨೦1೫ರಿಂದ ವಿಶ್ವದಾದ್ಯಂತ ಪ್ರತಿವರ್ಷ ಜೂನ್ ೨೧ರಂದು ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ವರ್ಷದ ಅತಿ ಉದ್ದದ ದಿನವಾಗಿರುವ ಜೂನ್ ೨೧ಕ್ಕೆ ವಿಶೇಷ ಮಹತ್ವವಿದ್ದು, ಯೋಗದ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಸಂದೇಶವನ್ನು ಈ ದಿನ ಸಾರಲಾಗುತ್ತದೆ” ಎಂದು ಹೇಳಿದರು.
ಬೆಳಗ್ಗೆಯಿಂದಲೇ ಕಾಗವಾಡ ತಾಲೂಕು ಆಡಳಿತದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಶಿವಾನಂದ ಮಹಾವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು. ಇದೇ ವೇಳೆ ನ್ಯಾಯವಾದಿಗಳ ಸಂಘದ ಸದಸ್ಯರು, ವಕೀಲರು ಹಾಗೂ ಗಣ್ಯರು ಜೆಎಂಎಫ್ಸಿ ನ್ಯಾಯಾಲಯದ ಮುಂಭಾಗದಲ್ಲಿ ಒಂದು ಗಂಟೆ ಕಾಲ ಯೋಗಾಭ್ಯಾಸ ನಡೆಸಿದರು.
ಅದೇ ರೀತಿ ಉಗಾರದ ಶ್ರೀಹರಿ ವಿದ್ಯಾಲಯ, ಸರ್ಕಾರಿ ಕನ್ನಡ ಹಾಗೂ ಮರಾಠಿ ಶಾಲೆಗಳು, ಉಗಾರ ಬುಧ್ರುಕ್ ಗ್ರಾಮದ ಶಾಸಕರ ಮಾದರಿ ಶಾಲೆ, ಶೇಡಬಾಳದ ಶ್ರೀ ಸನ್ಮತಿ ವಿದ್ಯಾಲಯ ಹಾಗೂ ಕಾಗವಾಡದ ಮಲ್ಲಿಕಾರ್ಜುನ ವಿದ್ಯಾಲಯ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಯೋಗ ತಜ್ಞರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಯೋಗಾಭ್ಯಾಸದಲ್ಲಿ ಭಾಗವಹಿಸಿ ವಿಶ್ವ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
– ಸುಕುಮಾರ್ ಬನ್ನೂರೆ, ಇನ್ ನ್ಯೂಸ್, ಕಾಗವಾಡ
