Belagavi

ಬೆಳಗಾವಿಯಲ್ಲಿ ಕೃತಿ ಲೋಕಾರ್ಪಣೆ: ಕನ್ನಡ ಸಾಹಿತ್ಯವು ಸಾಮರಸ್ಯದ ಭಾವನೆ ಹೊಂದಿದೆ; ಪ್ರಾ. ಡಾ. ಎಚ್. ಬಿ. ಕೋಲಕಾರ

Share

ಬೆಳಗಾವಿಯ ರಂಗಸೃಷ್ಟಿ ಸಾಂಸ್ಕೃತಿಕ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಪ್ರಾಧ್ಯಾಪಕ ಡಾ. ಎಚ್. ಬಿ. ಕೋಲಕಾರ ಅವರು ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು. ಕನ್ನಡ ಸಾಹಿತ್ಯವು ಜೈನ, ವೀರಶೈವ ಹಾಗೂ ಬ್ರಾಹ್ಮಣ ಸಾಹಿತ್ಯದ ಮೂಲಕ ಇಡೀ ಸಮಾಜದಲ್ಲಿ ಸದಾ ಸಾಮರಸ್ಯದ ಭಾವನೆಯನ್ನು ಮೂಡಿಸುತ್ತಾ ಬಂದಿದೆ ಎಂದು ಅವರು ಈ ವೇಳೆ ಪ್ರತಿಪಾದಿಸಿದರು.

ಬೆಳಗಾವಿಯ ರಾಣಿಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ|| ಪಿ. ಜಿ. ಕೆಂಪಣ್ಣವರ ಅವರ “ಜೀನ ದೀವಿಗೆ” ಹಾಗೂ ಶಿರೀಷ ಜೋಶಿ ಅವರ “ಮರಾಠಿಯೊಳಗೊಂದು ಕನ್ನಡ ಗತವೈಭವ” ಕೃತಿಗಳು ಲೋಕಾರ್ಪಣೆಗೊಂಡವು. ಈ ವೇಳೆ ಕೃತಿಗಳ ಕುರಿತು ಮಾತನಾಡಿದ ಪ್ರಾಧ್ಯಾಪಕ ಡಾ. ಎಚ್. ಬಿ. ಕೋಲಕಾರ ಅವರು, ಕನ್ನಡದ ಸಾಹಿತ್ಯ ಎಂದರೇ ಜೀನ ಸಾಹಿತ್ಯದ ಓದು ಎಂಬುದು ಸಾಹಿತ್ಯ ವಿಮರ್ಶಕರಿಂದ ಬಂದಿದೆ. ರಂ. ಶ್ರೀ. ಮುಗಳಿ ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಅದ್ಭುತ ಕೊಡುಗೆ ಎಂದರೇ, ಅದು ‘ಕನ್ನಡ ಸಾಹಿತ್ಯ ಚರಿತ್ರೆ’. ಇದರಲ್ಲಿ ಇಡೀ ಕನ್ನಡ ಸಾಹಿತ್ಯವನ್ನು ಜೈನ ಸಾಹಿತ್ಯ, ವೀರಶೈವ ಸಾಹಿತ್ಯ ಮತ್ತು ಬ್ರಾಹ್ಮಣ ಸಾಹಿತ್ಯ ಎಂದು ಅತ್ಯಂತ ವ್ಯವಸ್ಥಿತವಾಗಿ ವರ್ಗೀಕರಿಸಲಾಗಿದೆ ಎಂದು ತಿಳಿಸಿದರು. ಮುಂದುವರಿದು ಮಾತನಾಡಿದ ಅವರು, ಕಾಲಾನಂತರ ಕವಿಗಳನ್ನು ಗಣನೆಗೆ ತೆಗೆದುಕೊಂಡು ಪಂಪಾರಣ್ಯ, ಬಸವ ಅಲ್ಲಮರ ಕಾಲ, ಕುಮಾರವ್ಯಾಸ ಹಾಗೂ ರತ್ನಾಕರ ವರ್ಣಿ ಹೀಗೆ ಸಾತ್ವಿಕವಾಗಿ ಕನ್ನಡ ಸಾಹಿತ್ಯದ ವರ್ಗೀಕರಣವನ್ನು ನಾಲ್ಕು ಪ್ರಮುಖ ಆಯಾಮಗಳಲ್ಲಿ ಮಾಡಲಾಗಿದೆ. ಕನ್ನಡ ಸಾಹಿತ್ಯವೆಂದರೇ ಒಂದು ಕಾಲಕ್ಕೆ ಜೈನ ಧರ್ಮ, ಜೈನ ಸಾಹಿತ್ಯವೆಂಬಂತೆಯಿತ್ತು. ಇದು ಸಮಾಜದಲ್ಲಿ ಸದಾ ಸಾಮರಸ್ಯದ ಭಾವನೆಯನ್ನು ಹೊಂದಿದೆ. ಬುದ್ಧ, ಬಸವ ಮತ್ತು ಗಾಂಧೀಜಿಯವರು ಅನುಸರಿಸಿದ್ದು ಮಹಾವೀರನ ತತ್ವಗಳನ್ನೇ ಎಂದು ಕೆಂಪೇಗೌಡರು ಒಂದು ಕಡೆ ಹೇಳಿದ್ದಾರೆ ಎಂದರು.

ಈ ಭವ್ಯ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಡಾ. ಬಸವರಾಜ ಜಗಜಂಪಿ, ಎಲ್. ಎಸ್. ಶಾಸ್ತ್ರಿ, ಹಿರಿಯ ಲೇಖಕಿ ಡಾ. ಗುರುದೇವಿ ಹುಲ್ಲೆಪ್ಪನವರಮಠ, ರಂಗಸೃಷ್ಟಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ರಮೇಶ್ ಜಂಗಲ, ಉಪಾಧ್ಯಕ್ಷರಾದ ಶೈಲಜಾ ಭಿಂಗೆ, ಎಂ. ಕೆ. ಹೆಗಡೆ, ಕೋಶಾಧಿಕಾರಿ ಶಾಂತಾ ಆಚಾರ್ಯ ಹಾಗೂ ಕಾರ್ಯದರ್ಶಿ ಶರಣಗೌಡ ಪಾಟೀಲ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Tags:

error: Content is protected !!