ವಿಜಯಪುರ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಮಾಡಿದ ಬೆಳೆಗಳು ಒಣಗಲಾರಂಭಿಸಿದ್ದು, ಉತ್ತಮ ಮಳೆಯಾಗಲೆಂದು ರೈತರು ದೇವರ ಮೊರೆ ಹೋಗಿದ್ದಾರೆ. ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದಲ್ಲಿ ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ. ಈ ಕುರಿತು ಒಂದು ವರದಿ…


ಹೌದು… ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಹೋಬಳಿಯಲ್ಲಿ ಮಳೆ ಕೊರತೆಯಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳು ಒಣಗಲಾರಂಭಿಸಿದ್ದು, ಇನ್ನಾದರೂ ಮಳೆ ಸುರಿದು ಬೆಳೆ ಉಳಿಯಲಿ ಎಂಬ ಆಶಯದಿಂದ ರೈತರು ಮತ್ತು ಭಕ್ತರು ಗ್ರಾಮ ದೇವತೆಗಳ ಮೊರೆ ಹೋಗಿದ್ದಾರೆ.
ಬೆಳಿಗ್ಗೆ ಗಂಗಾಸ್ಥಳಕ್ಕೆ ತೆರಳಿದ ಭಕ್ತರು ಕುಂಭಗಳಲ್ಲಿ ನೀರು ತಂದು, ಗ್ರಾಮ ದೇವಿಯರಾದ ಗದ್ದೆಮ್ಮ ಹಾಗೂ ದ್ಯಾಮವ್ವ ದೇವಿಯರಿಗೆ ವಿಶೇಷ ಪೂಜೆ, ಅಭಿಷೇಕ, ಅರಿಶಿಣ-ಕುಂಕುಮ, ಹೂವಿನ ಅಲಂಕಾರ ಮಾಡಿ ಮಳೆಗಾಗಿ ಪ್ರಾರ್ಥಿಸಿದರು.
ಇನ್ನು ಪೂಜೆಯ ಬಳಿಕ ದೇವಸ್ಥಾನದ ಪನ್ನೊಳಗಿಗೆ ಹೂಮಾಲೆ ಹಾಕಿ ವಿಶೇಷ ಆರಾಧನೆ ನಡೆಸಲಾಯಿತು. ನಂತರ ಗಂಗಾಸ್ಥಳದಿಂದ ತಂದ ಕುಂಭಗಳ ನೀರನ್ನು ಪನ್ನೊಳಗಿ ನಾಲೆಗೆ ಸುರಿಸುವ ಮೂಲಕ ಉತ್ತಮ ಮಳೆಯಾಗಲಿ ಎಂದು ವಿಶೇಷ ಸಂಪ್ರದಾಯವನ್ನು ನೆರವೇರಿಸಿದರು. ಈ ವೇಳೆ ಮಂತ್ರಪಠಣ, ಪುಷ್ಪಾರ್ಚನೆ, ಮಹಾಮಂಗಳಾರತಿ, ನೈವೇದ್ಯ, ತೀರ್ಥಪ್ರಸಾದ ವಿತರಣೆ, ಭಂಡಾರ ಎರಚಾಟ, ಡೊಳ್ಳು ಕುಣಿತ, ಭಜನೆ ಹಾಗೂ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬರಗಾಲದ ಮುನ್ಸೂಚನೆ ಕಂಡಾಗಲೆಲ್ಲ ಮಳೆಗಾಗಿ ಪನ್ನೊಳಗಿ ಪೂಜೆ ಮಾಡುವ ಸಂಪ್ರದಾಯವನ್ನು ನಮ್ಮ ಹಿರಿಯರು ಆರಂಭಿಸಿದ್ದು, ಅದನ್ನೇ ನಾವು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದೇವೆ” ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಒಟ್ಟಾರೆ, ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರು ಪ್ರಕೃತಿಯ ಕೃಪೆಗಾಗಿ ದೇವರ ಮೊರೆ ಹೋಗಿದ್ದು, ಶೀಘ್ರವೇ ಉತ್ತಮ ಮಳೆಯಾಗಿ ಬೆಳೆಗಳು ಉಳಿಯಲಿ ಎಂಬ ಪ್ರಾರ್ಥಿಸಿದ್ದಾರೆ. ಮಳೆರಾಯ ಇನ್ನಾದ್ರೂ ಕರುಣೆ ತೋರುವವನೆ ಎಂದು ಕಾದು ನೋಡಬೇಕಿದೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
