Vijaypura

ತಾನೊಬ್ಬ ಡಿಎಸ್‌ಪಿ ಎಂದು ನಂಬಿಸಿ ಲಕ್ಷಾಂತರ ರೂ. ವಂಚನೆ: 12 ವರ್ಷ ತಲೆಮರೆಸಿಕೊಂಡಿದ್ದ ಖದೀಮ ಸೆರೆ

Share

ತಾನೊಬ್ಬ ಡಿಎಸ್‌ಪಿ ಎಂದು ಹೇಳಿಕೊಂಡು ಖಾಕಿ ಸಮವಸ್ತ್ರ ಧರಿಸಿ ನಿರುದ್ಯೋಗಿ ಯುವಕರಿಗೆ ಪೊಲೀಸ್, ಪಿಎಸ್‌ಐ ಹಾಗೂ ಜೈಲರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ನಡೆಸಿದ್ದ ಹಾಗೂ ಅಪಹರಣ, ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಜಯಪುರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ವರಗೋಡದಿನ್ನಿ ಗ್ರಾಮದ ಗ್ಯಾನನಗೌಡ ಅಲಿಯಾಸ್ ಜ್ಞಾನಗೌಡ ಅಲಿಯಾಸ್ ಗಣೇಶ ಅಲಿಯಾಸ್ ಸಿ. ಸಂಪತ್‌ಕುಮಾರ (31) ಎಂದು ಗುರುತಿಸಲಾಗಿದೆ. ಆರೋಪಿ 2012ರಲ್ಲಿ ವಿಜಯಪುರದ ವಿಠಲ ಗ್ಯಾನಪ್ಪ ಛಾಯಾಗೋಳ ಅವರ ಸಂಬಂಧಿಕನಿಗೆ ಪೊಲೀಸ್ ಉದ್ಯೋಗ ಕೊಡಿಸುವುದಾಗಿ ಹೇಳಿ ₹1.20 ಲಕ್ಷ ಪಡೆದು ವಂಚಿಸಿದ್ದ. ನಂತರ ಹಣ ವಾಪಸ್ ಕೇಳಿದ್ದಕ್ಕೆ 2014ರಲ್ಲಿ ಸಹಚರರೊಂದಿಗೆ ಸೇರಿ ಸಂತ್ರಸ್ತನನ್ನು ಅಪಹರಿಸಿ, ಕೊಪ್ಪಳ ಜಿಲ್ಲೆಯ ಹುಲಗಿ ಸಮೀಪದ ಕಾಲುವೆಯಲ್ಲಿ ಕೈಗಳಿಗೆ ಬೇಡಿ ಹಾಕಿ, ಕಾಲು ಕಟ್ಟಿ ಗೋಣಿ ಚೀಲದಲ್ಲಿ ಹಾಕಿ ನೀರಿಗೆ ತಳ್ಳುವ ಮೂಲಕ ಕೊಲೆ ಯತ್ನ ನಡೆಸಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ 12 ವರ್ಷಗಳಿಂದ ತಲೆಮರೆಸಿ ಕೊಂಡಿದ್ದ. ಈ ಅವಧಿಯಲ್ಲಿ ಮುದ್ದೇಬಿಹಾಳ ತಾಲೂಕಿನ ಹಂದ್ರಾಳ ಗ್ರಾಮದ ವ್ಯಕ್ತಿಯ ಮಗನಿಗೆ ಜೈಲರ್ ಉದ್ಯೋಗ ಕೊಡಿಸುವುದಾಗಿ ಹೇಳಿ ₹8 ಲಕ್ಷ ಪಡೆದು ವಂಚಿಸಿದ ಮತ್ತೊಂದು ಪ್ರಕರಣದಲ್ಲೂ ಭಾಗಿಯಾಗಿದ್ದಾನೆ.

ಎಪಿಎಂಸಿ ಠಾಣೆಯ ಪಿಎಸ್‌ಐ ಬಸವರಾಜ ತಿಪ್ಪರೆಡ್ಡಿ ನೇತೃತ್ವದ ವಿಶೇಷ ತಂಡ ತಾಂತ್ರಿಕ ಮಾಹಿತಿ ಆಧರಿಸಿ ಜುಲೈ 6ರಂದು ಬೆಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಆರೋಪಿಯ ವಿರುದ್ಧ ಮುದ್ದೇಬಿಹಾಳ, ಎಪಿಎಂಸಿ, ಆದರ್ಶನಗರ ಹಾಗೂ ತಾಳಿಕೋಟೆ ಪೊಲೀಸ್ ಠಾಣೆಗಳಲ್ಲಿ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

Tags:

error: Content is protected !!