Vijaypura

ಆಲಮಟ್ಟಿಯಲ್ಲಿ ಡೆಡ್ ಸ್ಟೋರೇಜ್‌ನಿಂದ ಚೇತರಿಕೆ: ಒಂದೇ ದಿನದಲ್ಲಿ ಆಲಮಟ್ಟಿಗೆ 1.26 ಲಕ್ಷ ಕ್ಯುಸೆಕ್ ನೀರು

Share

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯಕ್ಕೆ ಭರ್ಜರಿ ಒಳಹರಿವು ಆರಂಭವಾಗಿದೆ. ಕೆಲವೇ ದಿನಗಳ ಹಿಂದೆ ಡೆಡ್ ಸ್ಟೋರೇಜ್ ಮಟ್ಟದ ಸಮೀಪಕ್ಕೆ ಇಳಿದಿದ್ದ ಜಲಾಶಯ ಈಗ ಒಂದೇ ದಿನದಲ್ಲಿ 1.26 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರನ್ನು ಸ್ವೀಕರಿಸುತ್ತಿದೆ. ಇದರಿಂದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಜನರ ಕುಡಿಯುವ ನೀರಿನ ಆತಂಕ ದೂರವಾಗಿದ್ದು, ರೈತರಲ್ಲೂ ಹೊಸ ಆಶಾಭಾವನೆ ಮೂಡಿದೆ. ಈ ಕುರಿತು ಒಂದು ವರದಿ.

ನೆರೆ ರಾಜ್ಯ ಮಹಾರಾಷ್ಟ್ರದ ಮಹಾಬಳೇಶ್ವರ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕೃಷ್ಣಾ ನದಿ ಹಾಗೂ ಅದರ ಉಪನದಿಗಳು ತುಂಬಿ ಹರಿಯುತ್ತಿವೆ. ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ಹರಿಬಿಡಲಾಗುತ್ತಿರುವ ನೀರು ಇದೀಗ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯವನ್ನು ತಲುಪಿದ್ದು, ಪ್ರಸಕ್ತ ಮುಂಗಾರಿನ ಮೊದಲ ದೊಡ್ಡ ಪ್ರಮಾಣದ ಒಳಹರಿವು ದಾಖಲಾಗಿದೆ.

ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಆಲಮಟ್ಟಿ ಜಲಾಶಯದ ನೀರಿನ ಮಟ್ಟ 510.68 ಮೀಟರ್ ತಲುಪಿದ್ದು, ಒಟ್ಟು 33.337 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಲ್ಲಿ 15.717 ಟಿಎಂಸಿ ಜೀವಂತ ಸಂಗ್ರಹವಿದೆ. ಜಲಾಶಯಕ್ಕೆ ಸರಾಸರಿ 1 ಲಕ್ಷ 26 ಸಾವಿರ 373 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಹೊರಹರಿವು ಕೇವಲ 483 ಕ್ಯುಸೆಕ್ ಮಾತ್ರವಾಗಿದೆ. ಹೀಗಾಗಿ ಒಳಹರಿವಿನ ಬಹುತೇಕ ನೀರು ಜಲಾಶಯದಲ್ಲೇ ಸಂಗ್ರಹವಾಗುತ್ತಿದ್ದು, ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮಹಾಬಳೇಶ್ವರದಲ್ಲಿ 473 ಮಿಲಿ ಮೀಟರ್, ಕೊಯ್ನಾದಲ್ಲಿ 257, ಧೂಮ್ ಬಾಳಕವಡಿಯಲ್ಲಿ 305, ಪಾಟಗಾಂವದಲ್ಲಿ 256, ದೂದಗಂಗಾದಲ್ಲಿ 213, ರಾಧಾನಗರಿಯಲ್ಲಿ 202 ಮಿಲಿ ಮೀಟರ್ ಮಳೆಯಾಗಿರುವುದು ಆಲಮಟ್ಟಿಗೆ ಭಾರೀ ಒಳಹರಿವಿಗೆ ಕಾರಣವಾಗಿದೆ. ಕೆಲ ದಿನಗಳ ಹಿಂದಷ್ಟೇ ಜಲಾಶಯ ಡೆಡ್ ಸ್ಟೋರೇಜ್ ಮಟ್ಟದ ಸಮೀಪಕ್ಕೆ ತಲುಪಿದ್ದರಿಂದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಬಗ್ಗೆ ಆತಂಕ ಎದುರಾಗಿತ್ತು. ಆದರೆ ಈಗ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಜನರು ನಿರಾಳರಾಗಿದ್ದಾರೆ. ಇದೇ ರೀತಿಯ ಮಳೆ ಮುಂದುವರಿದರೆ ಜಲಾಶಯ ಶೀಘ್ರದಲ್ಲೇ ಭರ್ತಿಯಾಗಿ ರೈತರ ನೀರಾವರಿ ಚಿಂತೆಯೂ ದೂರವಾಗುವ ನಿರೀಕ್ಷೆ ಇದೆ.

ಒಟ್ಟಾರೆ ಮಹಾರಾಷ್ಟ್ರದ ಮಳೆ ಉತ್ತರ ಕರ್ನಾಟಕಕ್ಕೆ ಜೀವದಾನವಾಗಿದ್ದು, ಆಲಮಟ್ಟಿ ಜಲಾಶಯದತ್ತ ಹರಿದು ಬರುತ್ತಿರುವ ನೀರು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಜಲಾಶಯ ಶೀಘ್ರ ಭರ್ತಿಯಾಗಲಿ ಎಂಬುದು ಅವಳಿ ಜಿಲ್ಲೆಗಳ ಜನರ ಆಶಯವಾಗಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!