Vijaypura

ಲಾರಿ ಚಾಲಕನ‌ ನಿರ್ಲಕ್ಷ್ಯಕ್ಕೆ ಸರಣಿ ಅಪಘಾತ; ಇಬ್ಬರು ಯುವಕರ ದುರ್ಮರಣ

Share

ಒಂದು ಕ್ಷಣದ ನಿರ್ಲಕ್ಷ್ಯ… ಎರಡು ಅಮೂಲ್ಯ ಜೀವಗಳ ಅಂತ್ಯ… ವಿಜಯಪುರ ನಗರದಲ್ಲಿ ನಡೆದ ಭೀಕರ ರಸ್ತೆ ಅಪಘಾತ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ವೇಗವಾಗಿ ಬಂದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದು ಹಲವು ವಾಹನಗಳಿಗೆ ಢಿಕ್ಕಿ ಹೊಡೆದ ಬಳಿಕ ಅಂಗಡಿಗೆ ನುಗ್ಗಿದೆ. ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ. ಪರಾರಿಯಾಗಿರುವ ಲಾರಿ ಚಾಲಕನಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಈ ಕುರಿತು ಒಂದು ವರದಿ…

ವಿಜಯಪುರ ನಗರದ ಸೋಲಾಪುರ ರಾಷ್ಡ್ರೀಯ ಹೆದ್ದಾರಿ ಮೇಲಿರುವ ಅನಿಲ್ ಚಾಯ್ ಬಳಿಯ ಭೂತನಾಥ ಪೆಟ್ರೋಲ್ ಬಂಕ್ ಎದುರು ಬುಧವಾರ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಲಾರಿ ಚಾಲಕ ನಿಯಂತ್ರಣ ಕಳೆದುಕೊಂಡು ಮೊದಲು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಬೊಲೆರೋ, ಮತ್ತೊಂದು ಲಾರಿ ಹಾಗೂ ಟ್ರ್ಯಾಕ್ಟರ್ ಟ್ರಾಲಿಗೆ ಢಿಕ್ಕಿ ಹೊಡೆದು ಕೊನೆಗೆ ರಸ್ತೆ ಬದಿಯ ಅಂಗಡಿಗೆ ನುಗ್ಗಿದೆ. ಅಪಘಾತದಲ್ಲಿ ವಿಜಯಪುರ ಮೂಲದ ಭೂಷಣ ನಾಯಕ (24) ಹಾಗೂ ಹಾಸನ ಮೂಲದ ಗಗನ್ ಪರಮೇಶ (19) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಬಿಲಾಲ್ ಜಾತಗಾರ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ಅಪಘಾತದ ರಭಸ ಎಷ್ಟಿತ್ತೆಂದರೆ ಮೃತದೇಹಗಳು ಛಿದ್ರಗೊಂಡಿದ್ದವು. ಸ್ಥಳದಲ್ಲಿದ್ದವರು ಕೂಡ ಈ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದಾರೆ. ಅಪಘಾತದ ಬಳಿಕ ಲಾರಿ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಇದರಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಒಟ್ಟಾರೆ ಒಂದೇ ಕ್ಷಣದ ವೇಗ ಮತ್ತು ನಿರ್ಲಕ್ಷ್ಯ ಎರಡು ಯುವಕರ ಜೀವವನ್ನು ಕಸಿದುಕೊಂಡಿದೆ. ವೇಗ, ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯ ಚಾಲನೆ… ಇವೆಲ್ಲವೂ ಮತ್ತೊಮ್ಮೆ ಎರಡು ಅಮಾಯಕ ಜೀವಗಳನ್ನು ಬಲಿ ಪಡೆದಿವೆ. ರಸ್ತೆ ನಿಯಮಗಳನ್ನು ಪಾಲಿಸದಿದ್ದರೆ ಇಂತಹ ದುರಂತಗಳು ಮರುಕಳಿಸುತ್ತಲೇ ಇರುತ್ತವೆ ಎಂಬ ಎಚ್ಚರಿಕೆಯನ್ನು ಈ ಘಟನೆ ಮತ್ತೊಮ್ಮೆ ನೀಡಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!