ಬೆಳಗಾವಿ ನಗರದ ಪ್ರಮುಖ ವ್ಯಾಪಾರ ಕೇಂದ್ರವಾದ ಮಾರುತಿ ಗಲ್ಲಿಯಲ್ಲಿ ಇಂದು ಭಾರಿ ಶಬ್ದದೊಂದಿಗೆ ಬೃಹತ್ ಮರವೊಂದು ಬುಡಸಮೇತ ಕಿತ್ತುಬಿದ್ದಿದೆ. ಮಂಗಳವಾರದ ರಜೆಯ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನಸಂದಣಿ ಕಡಿಮೆಯಿದ್ದಿದ್ದರಿಂದ ಭಾರಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಬೆಳಗಾವಿ ನಗರದ ಅತ್ಯಂತ ಪ್ರಮುಖ ಹಾಗೂ ಸದಾ ಜನಜಂಗುಳಿಯಿಂದ ಕೂಡಿರುವ ಮಾರುಕಟ್ಟೆ ಪ್ರದೇಶವಾದ ಮಾರುತಿ ಗಲ್ಲಿಯಲ್ಲಿ ಮಂಗಳವಾರ ಭಾರಿ ಶಬ್ದದೊಂದಿಗೆ ಬೃಹತ್ ವೃಕ್ಷವೊಂದು ಬುಡಸಮೇತ ಕಿತ್ತು ರಸ್ತೆಗೆ ಉರುಳಿ ಬಿದ್ದಿದೆ. ಮರ ಪತನಗೊಂಡ ರಭಸಕ್ಕೆ ಮರದ ಕೆಳಗೆ ನಿಲ್ಲಿಸಲಾಗಿದ್ದ ಮೂರು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಸಿಲುಕಿಕೊಂಡಿದ್ದು, ತೀವ್ರವಾಗಿ ಜಖಂಗೊಂಡಿವೆ. ಇದೇ ವೇಳೆ ಮಾರುಕಟ್ಟೆಗೆ ಬಟ್ಟೆ ಖರೀದಿಸಲು ಬಂದಿದ್ದ ಬಾಲಕಿಯೊಬ್ಬಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಆಕೆಯನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಮಂಗಳವಾರದ ಹಿನ್ನೆಲೆಯಲ್ಲಿ ಇಂದು ಮಾರುತಿ ಗಲ್ಲಿಯ ಬಹುತೇಕ ಅಂಗಡಿ ಮುಂಗಟ್ಟುಗಳಿಗೆ ರಜೆ ಇತ್ತು. ಹೀಗಾಗಿ ರಸ್ತೆಯಲ್ಲಿ ಜನಜಂಗುಳಿ ಅತ್ಯಂತ ವಿರಳವಾಗಿದ್ದರಿಂದ ಒಂದು ದೊಡ್ಡ ಮಟ್ಟದ ಪ್ರಾಣಾಪಾಯ ಹಾಗೂ ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.

ಘಟನೆ ಸಂಭವಿಸುತ್ತಿದ್ದಂತೆ ಸಾರ್ವಜನಿಕರು ಆತಂಕಗೊಂಡರಾದರೂ, ತಕ್ಷಣವೇ ಕಾರ್ಯಪ್ರವೃತ್ತರಾದ ಸಂಬಂಧಪಟ್ಟ ನಗರ ಪಾಲಿಕೆ ಅಧಿಕಾರಿಗಳು ಮತ್ತು ವಿಪತ್ತು ಸುರಕ್ಷತಾ ತಂಡದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಬೃಹತ್ ಮರದ ಕೊಂಬೆಗಳನ್ನು ಕತ್ತರಿಸಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಲಾಯಿತು. ಮಾರುಕಟ್ಟೆಯ ಮುಖ್ಯ ರಸ್ತೆಯಲ್ಲೇ ಮರ ಬಿದ್ದಿದ್ದರಿಂದ ಹಲವು ಗಂಟೆಗಳ ಕಾಲ ಆ ಭಾಗದಲ್ಲಿ ವಾಹನ ಹಾಗೂ ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಸುರಕ್ಷತಾ ಸಿಬ್ಬಂದಿ ಸತತ ಶ್ರಮವಹಿಸಿ ಮರವನ್ನು ರಸ್ತೆಯಿಂದ ಪಕ್ಕಕ್ಕೆ ಸರಿಸಿದ ನಂತರ ಮಾರುತಿ ಗಲ್ಲಿಯಲ್ಲಿ ಸಂಚಾರ ವ್ಯವಸ್ಥೆ ಮತ್ತೆ ಸುಗಮಗೊಂಡಿತು.
