Uncategorized

ಬೆಳಗಾವಿ: ಮತದಾರರ ಪಟ್ಟಿ ಪರಿಷ್ಕರಣೆ ಅರ್ಜಿಯಲ್ಲಿ ಮರಾಠಿ ಭಾಷೆಗೂ ಅವಕಾಶ ನೀಡಿ – ಡಿಸಿಗೆ ಕಿರಣ ಜಾಧವ್ ಮನವಿ

Share

ಭಾರತ ಸರ್ಕಾರ ಹಾಗೂ ಚುನಾವಣಾ ಆಯೋಗ ದೇಶಾದ್ಯಂತ ಹಮ್ಮಿಕೊಂಡಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಅಭಿಯಾನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಗಡಿ ಜಿಲ್ಲೆಯ ಮರಾಠಿ ಭಾಷಿಕ ಮತದಾರರ ಅನುಕೂಲಕ್ಕಾಗಿ ಕನ್ನಡದ ಜೊತೆಗೆ ಮರಾಠಿ ಭಾಷೆಯ ಅರ್ಜಿಗಳನ್ನೂ ಒದಗಿಸುವಂತೆ ಸಕಲ ಮರಾಠಾ ಸಮಾಜದ ನಾಯಕ ಕಿರಣ ಜಾಧವ್ ಅವರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಸೋಮವಾರ (ಜುಲೈ 6) ಭೇಟಿ ಮಾಡಿದ ಸಕಲ ಮರಾಠಾ ಸಮಾಜದ ಮುಖಂಡ ಕಿರಣ ಜಾಧವ್, ಗಡಿಭಾಗದ ಅನೇಕ ನಾಗರಿಕರು ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ಪಡೆದಿರುವುದರಿಂದ ಅವರಿಗೆ ಚುನಾವಣಾ ಪ್ರಕ್ರಿಯೆಯ ಅರ್ಜಿಗಳನ್ನು ಅರ್ಥಮಾಡಿಕೊಳ್ಳಲು ತೊಂದರೆಯಾಗದಂತೆ ಮರಾಠಿ ಭಾಷೆಯಲ್ಲೂ ಫಾರ್ಮ್‌ಗಳನ್ನು ಲಭ್ಯವಾಗಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದರು.

ಪ್ರಸ್ತುತ ನೀಡಲಾಗುತ್ತಿರುವ ಕನ್ನಡ ಅರ್ಜಿಯ ಹಿಂಭಾಗದಲ್ಲಿಯೇ ಮರಾಠಿ ಭಾಷೆಯಲ್ಲೂ ಮಾಹಿತಿ ಮುದ್ರಿಸಿದರೆ ಮತದಾರರಿಗೆ ಹಾಗೂ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಅರ್ಜಿ ಭರ್ತಿ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ ಅವರು, ದ್ವಿಪ್ರತಿಮತದಾನ ತಡೆಗಟ್ಟುವ ಸರ್ಕಾರದ ಈ ರಾಷ್ಟ್ರಹಿತದ ಅಭಿಯಾನಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದರು. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಮರಾಠಿ ಭಾಷಿಕರ ಅನುಕೂಲಕ್ಕಾಗಿ ಈ ವಿಷಯವನ್ನು ಶೀಘ್ರದಲ್ಲೇ ಚುನಾವಣಾ ಆಯೋಗದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Tags:

error: Content is protected !!