ಕೇಂದ್ರ ಸಹಕಾರ ಸಚಿವಾಲಯವು ಐದು ವರ್ಷ ಪೂರೈಸಿದ ಸವಿನೆನಪಿನಲ್ಲಿ ಹಮ್ಮಿಕೊಳ್ಳಲಾದ “ಸಹಕಾರ ಸಪ್ತಾಹ” ಅಂಗವಾಗಿ ಬೆಳಗಾವಿಯಲ್ಲಿ ಅರ್ಥಪೂರ್ಣ ಸ್ವಚ್ಛತಾ ಅಭಿಯಾನ ನಡೆದಿದೆ. ಕರ್ನಾಟಕ ಸಹಕಾರ ಇಲಾಖೆ ಹಾಗೂ ವಿವಿಧ ಸಹಕಾರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಈ ವಿಶೇಷ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.


ಬೆಳಗಾವಿಯ ರವಿವಾರ ಪೇಟೆಯಲ್ಲಿ ದಿನಾಂಕ 05/07/2026 ರಂದು ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ವತಿಯಿಂದ ‘ಸ್ವಚ್ಛತಾ ಕಾರ್ಯಕ್ರಮ’ವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷರಾದ ರಮೇಶ ಕಳಸನ್ನವರ ಅವರು, ಸ್ವಚ್ಛತೆ ಎನ್ನುವುದು ಕೇವಲ ಕಸ ತೆಗೆಯುವುದಲ್ಲ, ಅದು ನಮ್ಮ ಜೀವನದ ಒಂದು ಸಂಸ್ಕೃತಿಯಾಗಿದ್ದು, ಶುದ್ಧ ಪರಿಸರವು ಆರೋಗ್ಯಕರ ಸಮಾಜವನ್ನು ನಿರ್ಮಿಸುತ್ತದೆ ಎಂದು ತಿಳಿಸಿದರಲ್ಲದೆ, ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಬಿ.ವಿ.ಉಪ್ಪಿನ, ಎಸ್.ಕೆ.ಪಾಟೀಲ, ಎನ್.ಡಿ.ಝುಂಡದ, ಜಿ.ಎಸ್.ಖಡಬಡಿ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ವರ್ಗ ಹಾಗೂ ಪೌರ ಕಾರ್ಮಿಕರು ಭಾಗವಹಿಸಿ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.
