ಬಳ್ಳಾರಿಯ ಗುಗ್ಗರಟ್ಟಿಯಲ್ಲಿ ಸಂಶಯದ ಬೆನ್ನೇರಿದ ಕ್ರೌರ್ಯವೊಂದು ಭೀಕರ ಜೋಡಿ ಕೊಲೆಯಲ್ಲಿ ಅಂತ್ಯವಾಗಿದೆ. ಹೆಂಡತಿಯ ನಡತೆಯ ಮೇಲೆ ಅನುಮಾನಗೊಂಡು ಪತಿ ತನ್ನ ತಂದೆಯೊಂದಿಗೆ ಸೇರಿ ಹೆಂಡತಿ ಮತ್ತು ಮಾವನನ್ನೇ ಭೀಕರವಾಗಿ ಕೊಂದ ಘಟನೆ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಐಜಿಪಿ ಹರ್ಷ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೆಂಡತಿಯ ಮೇಲಿನ ಅತಿಯಾದ ಅನುಮಾನ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆ ಮತ್ತು ಮಗ ಸೇರಿ ಇಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬಳ್ಳಾರಿಯ ನಗರ ಉಪವಿಭಾಗದ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಗ್ಗರೆಟ್ಟಿಯಲ್ಲಿ ಸಂಭವಿಸಿದೆ. ಆರೋಪಿಗಳಾದ ತೇಜಾ (29) ಮತ್ತು ಆತನ ತಂದೆ ಗುರುಶಂಕರ (50) ಎಂಬುವವರೇ ಈ ಕೃತ್ಯ ಎಸಗಿದ ದೋಬಿ ಕೆಲಸ ಮಾಡಿಕೊಂಡಿದ್ದ ಹಂತಕರು. ತೇಜನ ಪತ್ನಿ ನಾಗಲಕ್ಷ್ಮಿ (24) ಹಾಗೂ ಆಕೆಯ ತಂದೆ ಶ್ರೀನಿವಾಸ (48) ಎಂಬುವವರನ್ನು ಮನೆಯ ಮುಂಭಾಗದಲ್ಲೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸದೇ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವಗಳ ಮುಂದೆಯೇ ಕುಳಿತಿದ್ದ ದೃಶ್ಯ ಸ್ಥಳೀಯರಲ್ಲಿ ನಡುಕ ಹುಟ್ಟಿಸಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಐಜಿಪಿ ಹರ್ಷ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪತ್ನಿಯ ನಡತೆಯ ಮೇಲಿನ ಸಂಶಯ ಹಾಗೂ ಹಠಾತ್ ಆದ ವಾಗ್ವಾದವೇ ಈ ಜೋಡಿ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದಿದ್ದಾರೆ. ಈಗಾಗಲೇ ಇಬ್ಬರೂ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಸೈನ್ಸ್ ಅಂಡ್ ಫೋರೆನ್ಸಿಕ್ ಲ್ಯಾಬ್ (ಸೋಕೋ) ತಂಡ, ಶ್ವಾನ ದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆಗಮಿಸಿ ವೈಜ್ಞಾನಿಕ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ಬಳಸಿದ್ದ ಹರಿತವಾದ ಆಯುಧಗಳನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣದ ಕುರಿತು ಸಂಪೂರ್ಣ ತನಿಖೆ ನಡೆಸಿ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ಐಜಿಪಿ ತಿಳಿಸಿದ್ದಾರೆ.
