Uncategorized

ಅಥಣಿ ನೀರಾವರಿ ಇಲಾಖೆ ಕಚೇರಿಗೆ ರೈತರ ಮುತ್ತಿಗೆ; 13ನೇ ಕಾಲುವೆ ಸಮಸ್ಯೆ ಪರಿಹರಿಸುವಂತೆ ಆಗ್ರಹ

Share

ಕಳೆದ ಎಂಟು ವರ್ಷಗಳಿಂದ ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಯೋಜನೆ ಇನ್ನೂ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ ಎಂದು ಆರೋಪಿಸಿರುವ ರೈತರು, ತಕ್ಷಣ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಅಥಣಿ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದರು.

ಯೋಜನೆಯಡಿ ಕೇವಲ 10 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನೀರು ಪೂರೈಕೆ ಮಾಡಿ ಇಲಾಖೆ ಕೈತೊಳೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ಉಳಿದ ಪ್ರದೇಶಕ್ಕೂ ನೀರು ತಲುಪಿಸುವಂತೆ ಒತ್ತಾಯಿಸಿದರು. ಅರಳಿಹಟ್ಟಿ ಗ್ರಾಮದ ಮೂಲಕ ಹಾದುಹೋಗುವ 13ನೇ ಸಂಖ್ಯೆಯ ಕಾಲುವೆ ಒಬ್ಬ ರೈತನ ಭೂಸ್ವಾಧೀನ ಪರಿಹಾರ ವಿವಾದದಿಂದ ಮುಚ್ಚಲ್ಪಟ್ಟಿದ್ದು, ಇದರ ಪರಿಣಾಮ ನಾಲ್ಕು ಗ್ರಾಮಗಳ ಸುಮಾರು 4 ಸಾವಿರ ಹೆಕ್ಟೇರ್ ಕೃಷಿಭೂಮಿ ಕಾಲುವೆ ನೀರಿನಿಂದ ವಂಚಿತವಾಗಿದೆ ಎಂದು ರೈತರು ದೂರಿದರು.

ಸುಮಾರು 100ಕ್ಕೂ ಹೆಚ್ಚು ರೈತರು ಅಥಣಿ ನೀರಾವರಿ ಇಲಾಖೆ ಕಚೇರಿಗೆ ಆಗಮಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಭೂ ಪರಿಹಾರದ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಿ, ಮುಚ್ಚಿರುವ ಕಾಲುವೆಯನ್ನು ತೆರವುಗೊಳಿಸಿ ನೀರು ಹರಿಸಬೇಕು ಎಂದು ಆಗ್ರಹಿಸಿದರು. ಸಮಸ್ಯೆ ಶೀಘ್ರ ಪರಿಹರಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದರು.

ರೈತರ ಮನವಿಯನ್ನು ಆಲಿಸಿದ ಅಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Tags:

error: Content is protected !!