ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಶತಮಾನಗಳ ಇತಿಹಾಸ ಹೊಂದಿರುವ ಕಾರ ಹುಣ್ಣಿಮೆ ಉತ್ಸವ ಈ ವರ್ಷವೂ ಅದ್ದೂರಿಯಾಗಿ ನಡೆಯಿತು. ರೈತ ಸಂಸ್ಕೃತಿ, ಜಾನುವಾರುಗಳ ಮೇಲಿನ ಕೃತಜ್ಞತೆ ಮತ್ತು ಜನಪದ ಸಂಪ್ರದಾಯಗಳ ಸಂಗಮವಾಗಿರುವ ಈ ವಿಶಿಷ್ಟ ಆಚರಣೆಯನ್ನು ವೀಕ್ಷಿಸಲು ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಗೋವಾ ಹಾಗೂ ಆಂಧ್ರಪ್ರದೇಶದಿಂದಲೂ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರು ಆಗಮಿಸಿದ್ದರು.


ಆಷಾಢ ಹುಣ್ಣಿಮೆಯಂದು ಆಚರಿಸುವ ಕಾರ ಹುಣ್ಣಿಮೆ ಕಾಖಂಡಕಿ ಗ್ರಾಮದ ಐತಿಹಾಸಿಕ ಸಂಪ್ರದಾಯವಾಗಿದೆ. ಕೃಷಿಗೆ ಜೀವನಾಡಿಯಾಗಿರುವ ಎತ್ತು, ಎಮ್ಮೆ, ಹಸು ಹಾಗೂ ಇತರ ಜಾನುವಾರುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ರೈತರು ತಮ್ಮ ಕೃತಜ್ಞತೆ ಸಲ್ಲಿಸುತ್ತಾರೆ. ಕುಂಟೆ, ಗುದ್ದಲಿ, ಸನಿಕೆ, ಕುಡುಗೋಲು ಸೇರಿದಂತೆ ಕೃಷಿ ಉಪಕರಣಗಳಿಗೂ ಪೂಜೆ ನೆರವೇರಿಸಿ, ದುಡಿದ ಎತ್ತುಗಳಿಗೆ ಪೌಷ್ಟಿಕ ಆಹಾರ ನೀಡಿ ಗೌರವಿಸಲಾಗುತ್ತದೆ. ಬೆಳಗ್ಗೆ ಗ್ರಾಮದ ಪ್ರಮುಖರಾದ ರಾಮನಗೌಡ ಪಾಟೀಲ ಅವರ ಮನೆತನದಿಂದ ಪೂಜೆ ಹಾಗೂ ಮೆರವಣಿಗೆಗೆ ಚಾಲನೆ ದೊರೆಯಿತು. ಬ್ಯಾಂಡ್, ಡೊಳ್ಳು ಮತ್ತು ತಮಟೆಯ ನಾದದ ನಡುವೆ ಬಣ್ಣಬಣ್ಣದ ಅಲಂಕಾರಗೊಂಡ 40ಕ್ಕೂ ಹೆಚ್ಚು ಬಲಿಷ್ಠ ಎತ್ತುಗಳ ಮೆರವಣಿಗೆ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತು. ಮಧ್ಯಾಹ್ನ ನಡೆದ ಸಾಂಪ್ರದಾಯಿಕ ‘ಕಾರಿ’ ಕಾರ್ಯಕ್ರಮ ಜನರ ಪ್ರಮುಖ ಆಕರ್ಷಣೆಯಾಗಿದ್ದು, ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಉತ್ಸವಕ್ಕೆ ಸಾಕ್ಷಿಯಾದರು.
ಕಾರ ಹುಣ್ಣಿಮೆಯ ಪ್ರಮುಖ ಸಂಪ್ರದಾಯದಂತೆ ಗೌಡರ ಮನೆಯಿಂದ ಕೆಂಪು ಹಾಗೂ ಬಿಳಿ ಬಣ್ಣದ ಎರಡು ಬಾಸಿಂಗ್ ಎತ್ತುಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಯಾವ ಎತ್ತು ಮೊದಲು ಓಡುತ್ತದೆ ಎಂಬುದರ ಆಧಾರದ ಮೇಲೆ ಆ ವರ್ಷದ ಕೃಷಿ ಮತ್ತು ವ್ಯಾಪಾರದ ಭವಿಷ್ಯವನ್ನು ಅಂದಾಜಿಸುವ ನಂಬಿಕೆ ಗ್ರಾಮಸ್ಥರಲ್ಲಿದೆ. ಈ ಬಾರಿ ಕೆಂಪು ಎತ್ತು ಮುಂಚೂಣಿಯಲ್ಲಿ ಓಡಿದ್ದರಿಂದ ತೊಗರಿ, ಬೆಲ್ಲ, ಗೋಧಿ ಸೇರಿದಂತೆ ಕೆಂಪು ಬಣ್ಣದ ವಸ್ತುಗಳ ಬೆಲೆ ಏರಿಕೆಯಾಗಲಿದೆ ಎಂಬ ವಿಶ್ವಾಸ ರೈತರಲ್ಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕಲ್ಪಿಸಿತ್ತು.
