ಬೆಳಗಾವಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಈಗ ಪ್ರವಾಹದ ಭೀತಿ ಎದುರಾಗಿದೆ. ಕಾಂಗ್ರೆಸ್ ರಸ್ತೆಯ ಮಿಲಿಟರಿ ಮಹಾದೇವ ಮಂದಿರದ ಬಳಿಯ ನಾಲಾ ಸಂಪೂರ್ಣ ಬಂದ್ ಆಗಿದ್ದು, ತಕ್ಷಣವೇ ಸ್ವಚ್ಛಗೊಳಿಸದಿದ್ದರೆ ಮೂರು ಪ್ರಮುಖ ಕಾಲನಿಗಳು ಜಲಾವೃತಗೊಳ್ಳುವ ಆತಂಕ ಸೃಷ್ಟಿಯಾಗಿದೆ.


ಬೆಳಗಾವಿಯ ಕಾಂಗ್ರೆಸ್ ರಸ್ತೆಯ ಓವರ್ಬ್ರಿಡ್ಜ್ ಕೆಳಗಿರುವ ಮಿಲಿಟರಿ ಮಹಾದೇವ ಮಂದಿರದ ಎದುರಿನ ನಾಲಾ ದ್ವಾರದಲ್ಲಿ ಟನ್ ಗಟ್ಟಲೆ ಪ್ಲಾಸ್ಟಿಕ್ ಕಸ ಬಂದು ಸಿಲುಕಿಕೊಂಡಿದೆ. ಇದರಿಂದಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಅಲ್ಲಿಯೇ ನಿಲ್ಲುತ್ತಿದ್ದು, ಕೃತಕ ಜಲಾವೃತ ಸ್ಥಿತಿ ನಿರ್ಮಾಣವಾಗಿದೆ. ನಿರಂತರವಾಗಿ ಮಳೆ ಮುಂದುವರಿದರೆ, ಈ ಕಸದ ಬ್ಲಾಕೇಜ್ನಿಂದಾಗಿ ಹತ್ತಿರದ ಮರಾಠಾ ಕಾಲನಿ, ನಾನಾವಾಡಿ ಮತ್ತು ವಿವೇಕಾನಂದ ಕಾಲನಿಗಳಿಗೆ ನೀರು ನುಗ್ಗಿ ಪ್ರವಾಹದ ಪರಿಸ್ಥಿತಿ ಎದುರಾಗಲಿದೆ ಎಂದು ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ಶ್ರೀ ಸುಧಾಕರ್ ಚಾಲ್ಕೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು, ತಕ್ಷಣವೇ ಯುದ್ಧೋಪಾದಿಯಲ್ಲಿ ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಬೇಕಾಗಿದೆ.
