ಕಳೆದ ಕೆಲ ದಿನಗಳವರೆಗೆ ಬರದ ಛಾಯೆಯಿಂದ ಸಂಪೂರ್ಣ ಬತ್ತಿಹೋಗಿದ್ದ ಕೃಷ್ಣಾ ನದಿಯಲ್ಲಿ ಇದೀಗ ಮತ್ತೆ ನೀರು ಹರಿಯತೊಡಗಿದ್ದು, ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಜುಲೈ ೨ರಂದು ನೀರಿಲ್ಲದೆ ಬಣಗುಟ್ಟಿದ್ದ ನದಿ, ಜುಲೈ ೪ರಂದು ನೀರು ತುಂಬಿ ಹರಿಯುತ್ತಿರುವ ದೃಶ್ಯ ಕಂಡು ಜನರು ಸಂತಸ ವ್ಯಕ್ತಪಡಿಸಿದರು.


ಈ ವರ್ಷ ಮುಂಗಾರು ಆರಂಭದಿಂದಲೇ ಮಳೆಯ ಕೊರತೆ ಎದುರಾಗಿತ್ತು. ಜೂನ್ ತಿಂಗಳಿಡೀ ಸಮರ್ಪಕ ಮಳೆಯಾಗದ ಕಾರಣ ಮುಂಗಾರು ಬಿತ್ತನೆ ತೀವ್ರವಾಗಿ ವಿಳಂಬವಾಗಿತ್ತು. ಕೆಲ ರೈತರು ಬಿತ್ತನೆ ಮಾಡಿದ ಬೆಳೆಗಳು ಸಹ ಮಳೆಯ ಕೊರತೆಯಿಂದ ಒಣಗಲು ಆರಂಭಿಸಿದ್ದವು. ಅಲ್ಲದೆ ಕುಡಿಯುವ ನೀರಿನ ಸಮಸ್ಯೆಯೂ ದಿನದಿಂದ ದಿನಕ್ಕೆ ಗಂಭೀರವಾಗುತ್ತಿತ್ತು.
ಆದರೆ ಕಳೆದ ಎರಡು ದಿನಗಳಿಂದ ಕಾಗವಾಡ ತಾಲೂಕು ಹಾಗೂ ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ನೀರಿನ ಹರಿವು ಆರಂಭವಾಗಿದೆ. ನದಿಯಲ್ಲಿ ಮತ್ತೆ ನೀರು ಹರಿಯುತ್ತಿರುವುದು ರೈತರು, ಮೀನುಗಾರರು ಹಾಗೂ ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿಸಿದೆ.
ರಾಜ್ಯ ಸರ್ಕಾರವು ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ತಡೆಯಲು, ನದಿಯಿಂದ ನೀರು ಎತ್ತುವ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಕಳೆದ ೧೫ ದಿನಗಳ ಹಿಂದೆ ಸ್ಥಗಿತಗೊಳಿಸಿತ್ತು. ಇದೀಗ ನದಿಯಲ್ಲಿ ನೀರಿನ ಹರಿವು ಆರಂಭವಾಗಿರುವುದರಿಂದ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ವ್ಯಕ್ತವಾಗಿದೆ.
ಈ ಕುರಿತು ಹಿರಿಯ ರೈತರೊಬ್ಬರು ಮಾತನಾಡಿ, “ಪ್ರಕೃತಿಯ ಶಕ್ತಿಯ ಮುಂದೆ ಯಾರ ಶಕ್ತಿಯೂ ನಡೆಯುವುದಿಲ್ಲ. ಮಹಾರಾಷ್ಟ್ರದಿಂದ ನೀರು ಬಿಡುಗಡೆ ಮಾಡುವ ಕುರಿತು ಹಲವು ಚರ್ಚೆಗಳು ನಡೆದಿದ್ದರೂ, ಅಂತಿಮವಾಗಿ ಪ್ರಕೃತಿಯ ಕೃಪೆಯಿಂದಲೇ ಕೃಷ್ಣಾ ನದಿಯಲ್ಲಿ ನೀರು ಹರಿಯತೊಡಗಿದೆ. ಇದರಿಂದ ರೈತರಿಗೆ ಹೊಸ ಆಶಾಕಿರಣ ಮೂಡಿದೆ” ಎಂದು ಅಭಿಪ್ರಾಯಪಟ್ಟರು.
ಜೂನ್ ತಿಂಗಳ ಸಂಪೂರ್ಣ ಅವಧಿ ಕಳೆದುಹೋಗಿದ್ದರೂ, ಈಗ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಜುಲೈ ತಿಂಗಳಲ್ಲಿ ತಡವಾದರೂ ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸುತ್ತಿದ್ದಾರೆ.
