ಚಿಕ್ಕೋಡಿ-“ಸಮಾಜದಲ್ಲಿ ಮೌಲ್ಯಗಳು ಉಳಿದು ಬೆಳೆಯಬೇಕಾದರೆ ದೇಶ ಸಾಂಸ್ಕೃತಿಕವಾಗಿ ಶ್ರೀಮಂತವಾಗಬೇಕು. ಅಂತಹ ಕಾರ್ಯಗಳನ್ನು ಸಂಘಟನೆ, ಸರ್ಕಾರ, ಸಂಘ ಸಂಸ್ಥೆಗಳು ಇಂದಿನ ದಿನಗಳಲ್ಲಿ ಮಾಡಬೇಕಾಗಿರುವುದು ಅನಿವಾರ್ಯವಿದೆ” ಎಂದು ಚಿಕ್ಕೋಡಿ ಸಿಪಿಐ ವಿಶ್ವನಾಥ ಚೌಗಲಾ ಹೇಳಿದರು.

ಪಟ್ಟಣದ ಆರ್ ಡಿ ಪಿಯು ಕಾಲೇಜಿನ ಸಭಾಭವನದಲ್ಲಿ ಉನ್ನತಿ ಸ್ವಯಂಸೇವಾ ಸಂಸ್ಥೆ ಚಿಕ್ಕೋಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಹಾಗೂ ಸಿಟಿಇ ಸಂಸ್ಥೆ ಚಿಕ್ಕೋಡಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸಾಂಸ್ಕೃತಿಕ ಕಲಾ ಪರಿಮಳ-2026’ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡುತ್ತಾ, “ಕಳೆದ ಏಳು ವರ್ಷಗಳಿಂದ ಉನ್ನತಿ ಸ್ವಯಂಸೇವಾ ಸಂಸ್ಥೆಯು ಶಿಕ್ಷಣ ಜಾಗೃತಿ, ಯುವ ಮತ್ತು ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸ್ಪಂಧಿಸುತ್ತಾ ನ್ಯಾಯ ಒದಗಿಸುವ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಾ ಬಂದಿದೆ. ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮನೋರಂಜನೆ ಹಾಗೂ ಸುಸಂದೇಶ ನೀಡುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ” ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿಕ್ಕೋಡಿ ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ ಮಾತನಾಡುತ್ತಾ, ” ಪಟ್ಟಣದಲ್ಲಿ ಇಂತಹ ಕಾರ್ಯಕ್ರಮಗಳು ಆಗಾಗ ಏರ್ಪಡಿಸಬೇಕು. ಇದರಿಂದ ಜನರಲ್ಲಿ ಜಾಗೃತಿ ಉಂಟಾಗುತ್ತದೆ. ಮೊಬೈಲ್, ಟಿವಿಯಿಂದ ಹೊರಬರಲು ಅನುಕೂಲವಾಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಿಟಿಇ ಸಂಸ್ಥೆಯ ವಿ ಎಸ್ ಮಾಂಜರೇಕರ ಮಾತನಾಡುತ್ತಾ, “ಯುವ ಜನತೆಯು ಕಲೆ, ಸಾಹಿತ್ಯ, ಸಂಗೀತ, ನಾಟಕ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗುತ್ತಿದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ, ನಿಯಮಿತ ವ್ಯಾಯಾಮ ಮಾಡುವದರೊಂದಿಗೆ ಆರೋಗ್ಯ ಕಾಪಾಡಿಕೊಳ್ಳುವ ಹೊಣೆಗಾರಿಕೆ ಇಂದಿನ ಯುವ ಜನಾಂಗದ ಮೇಲಿದೆ” ಎಂದು ಕಿವಿಮಾತು ಹೇಳಿದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನಾ ಕಾರ್ಯದರ್ಶಿ ಎನ್ ಜಿ ಪಾಟೀಲ ಅವರಿಗೆ 2026ನೇ ಸಾಲಿನ “ಶಿಕ್ಷಕ ರತ್ನ ಪ್ರಶಸ್ತಿ”ಯನ್ನು ವೇದಿಕೆಯ ಮೇಲಿದ್ದ ಗಣ್ಯರು ಪ್ರದಾನ ಮಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರಾದ ಧನಪಾಲ ಪಟವರ್ಧನ, ಉಮಾ ಹಾದಿಮನಿ, ಕವಿತಾ ಹಟ್ಟಿ, ಶಂಕರ ಡಂಗೇರ ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಲಾ ಪರಿಮಳ ಕಾರ್ಯಕ್ರಮದಲ್ಲಿ ಸುಜಾತ ಮಗದುಮ್ಮ ತಂಡದಿಂದ ವಚನ ಗಾಯನ, ಸಿಂಧು ಹಟ್ಟಿ ತಂಡದಿಂದ ಭರತನಾಟ್ಯ, ಶಕುಂತಲಾ ಹೊಸಮನಿ ತಂಡದಿಂದ ಗೀಗೀಪದ, ಕೃತಿಕಾ ಮಾಳಿ ತಂಡದಿಂದ ಸಮೂಹ ನೃತ್ಯ, ಸಾವಿತ್ರಿ ಬಡಿಗೇರ ತಂಡದಿಂದ ಸಂಪ್ರದಾಯ ಪದ, ಶ್ರಾವಣಿ ಹುಲ್ಲೇನ್ನವರ ತಂಡದಿಂದ ಕೋಲಾಟ ನೃತ್ಯ, ಬಾಳಪ್ಪ ಕುಂಬಾರ ತಂಡದಿಂದ ಭಜನಾ ಪದ ಹಾಗೂ ಮಹಮ್ಮದಹನೀಫ ಜಮಾದಾರ ತಂಡದಿಂದ ಸಣ್ಣಾಟ ಪದ ಮುಂತಾದ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಆರ್ ಡಿ ಪಿಯು ಕಾಲೇಜಿನ ಪ್ರಾಚಾರ್ಯ ಯು ಎಸ್ ಶಿಂಧೆ, ಉನ್ನತಿ ಸ್ವಯಂಸೇವಾ ಸಂಸ್ಥೆಯ ಕಾರ್ಯದರ್ಶಿ ವಿಮಲಾ ಚಿನಕೇಕರ, ನಂದಕುಮಾರ ಪಾಟೀಲ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕøತ ಕಲಾವಿದ ಭರತ ಕಲಾಚಂದ್ರ, ಗುರುಪ್ರಸಾದ ಕಲಾಚಂದ್ರ, ಸುಜಾತಾ ಮಗದುಮ್ಮ ಮುಂತಾದವರು ಇದ್ದರು.
