ಕುಂದಾನಗರಿ ಬೆಳಗಾವಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಇಳಿಜಾರು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ನಗರದ ಛತ್ರಪತಿ ಶಿವಾಜಿ ನಗರದಲ್ಲಿ ಚರಂಡಿಗಳು ಉಕ್ಕಿ ಹರಿದು ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ್ದರೆ, ಮತ್ತೊಂದೆಡೆ ಕಾಲೇಜು ರಸ್ತೆಯ ಒಳಚರಂಡಿ ಓವರ್ ಫ್ಲೋ ಆಗಿ ಶಾಲಾ ಆವರಣಕ್ಕೆ ಕೊಳಚೆ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಸಿದೆ.


ಬೆಳಗಾವಿ ನಗರದ ಛತ್ರಪತಿ ಶಿವಾಜಿ ನಗರದಲ್ಲಿ ಮಳೆಯಿಂದಾಗಿ ಭಾರಿ ಆತಂಕ ಸೃಷ್ಟಿಯಾಗಿದೆ. ಇಲ್ಲಿನ ಬೃಹತ್ ಧ್ವಜ ಸ್ತಂಭದ ಬಳಿ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸ-ತ್ಯಾಜ್ಯಗಳು ಸಿಲುಕಿಕೊಂಡು ಚರಂಡಿ ಸಂಪೂರ್ಣ ಬ್ಲಾಕ್ ಆಗಿದೆ. ಇದರಿಂದಾಗಿ ನೀರು ಸರಾಗವಾಗಿ ಹರಿದು ಹೋಗಲು ದಾರಿಯಿಲ್ಲದೆ, ‘ಪಂಜಿ ಬಾಬಾ’ ದರ್ಗಾ ಸುತ್ತಮುತ್ತಲಿನ ಇಳಿಜಾರು ಪ್ರದೇಶದ ಮನೆಗಳಿಗೆ ಕೊಳಚೆ ನೀರು ನುಗ್ಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ಪರಿಸ್ಥಿತಿ ಮರುಕಳಿಸುತ್ತಿದ್ದು, ಅಧಿಕಾರಿಗಳು ಕೇವಲ ಪಂಪ್ ಸೆಟ್ ಅಳವಡಿಸಿ ನೀರು ಹೊರಹಾಕುವ ತಾತ್ಕಾಲಿಕ ಪ್ರಯತ್ನ ಮಾಡುತ್ತಿದ್ದಾರೆಯೇ ವಿನಃ ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ ಎಂದು ಸ್ಥಳೀಯ ಮಹಿಳೆಯೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ಮಳೆಗಾಲದಲ್ಲಿ ಈ ಭಾಗದ ಸಾರಿಗೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳುತ್ತಿರುವುದಕ್ಕೆ ಸಾರ್ವಜನಿಕರು ಆತಂಕ ಹೊರಹಾಕಿದ್ದಾರೆ. ಮುಖ್ಯ ರಸ್ತೆಯು ಮಳೆ ನೀರಿನಿಂದ ತುಂಬಿ ಹೋಗುವುದರಿಂದ ಆಟೋ ರಿಕ್ಷಾ ಹಾಗೂ ಇತರೆ ವಾಹನಗಳ ಸಂಚಾರ ದುಸ್ತರವಾಗಿದೆ. ಇತ್ತೀಚೆಗಷ್ಟೇ ಶಾಲಾ ಮಕ್ಕಳಿದ್ದ ಆಟೋ ರಿಕ್ಷಾವೊಂದು ಇಲ್ಲಿನ ತೆರೆದ ಚರಂಡಿಗೆ ಉರುಳಿಬಿದ್ದ ಭೀಕರ ಘಟನೆಯನ್ನು ಸ್ಥಳೀಯ ಆಟೋ ಚಾಲಕರೊಬ್ಬರು ನೆನಪಿಸಿಕೊಂಡಿದ್ದು, ಕಳಪೆ ಮೂಲಸೌಕರ್ಯ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗಕ್ಕೆ ಸರಿಯಾದ ರಸ್ತೆ ಮತ್ತು ಸುರಕ್ಷಿತ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಅಪಘಾತಗಳಿಗೆ ಮುಖ್ಯ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಸಮಸ್ಯೆಯ ಮಾಹಿತಿ ತಿಳಿಯುತ್ತಿದ್ದಂತೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರ ಪರವಾಗಿ ಯುವ ಮುಖಂಡ ಅಮಾನ್ ಸೇಠ್ ಅವರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಾಲಿಕೆ ಸಿಬ್ಬಂದಿ 24 ಗಂಟೆಯೂ ಜೆಸಿಬಿ ಯಂತ್ರಗಳ ಮೂಲಕ ಚರಂಡಿ ಸ್ವಚ್ಛಗೊಳಿಸುವ ಕಾರ್ಯಾಚರಣೆಯಲ್ಲಿದ್ದರೂ, ಸಾರ್ವಜನಿಕರು ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳನ್ನು ಚರಂಡಿಗೆ ಎಸೆಯುತ್ತಿರುವುದರಿಂದ ಬ್ಲಾಕೇಜ್ ಉಂಟಾಗಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಅಮಾನ್ ಸೇಠ್ ಬೇಸರ ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಕಸ ಎಸೆಯದೆ ಸಹಕರಿಸಬೇಕು ಹಾಗೂ ಯಾವುದೇ ತುರ್ತು ಸಮಸ್ಯೆಗಳಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣ ಸ್ಪಂದಿಸುವುದಾಗಿ ಅವರು ಭರವಸೆ ನೀಡಿದರು.
ಇದೇ ವೇಳೆ, ನಗರದ ಕಾಲೇಜು ರಸ್ತೆಯಲ್ಲಿರುವ ಒಳಚರಂಡಿ ಓವರ್ ಫ್ಲೋ ಆಗಿದ್ದು, ಕೊಳಚೆ ನೀರು ನೇರವಾಗಿ ವನಿತಾ ವಿದ್ಯಾಲಯ ಹೈಸ್ಕೂಲಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಒಳಚರಂಡಿಯೊಳಗೆ ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಫ್ಲೈ ಓವರ್‌ನ ಪಿಲ್ಲರ್ ಪತ್ತೆಯಾಗಿದ್ದು, ಇದರಿಂದಲೇ ನೀರು ಸರಾಗವಾಗಿ ಹರಿದು ಹೋಗದೇ ಬ್ಲಾಕ್ ಆಗಿರುವ ಶಂಕೆ ವ್ಯಕ್ತವಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ದಂಡು ಮಂಡಳಿ ಸಿಬ್ಬಂದಿ ಸಕೀಂಗ್ ಮಷೀನ್ ಮೂಲಕ ಒಳಚರಂಡಿಯಲ್ಲಿದ್ದ ಬ್ಲಾಕೇಜ್ ತೆರವುಗೊಳಿಸಿ, ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
