ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಹುಣಸಿಕೊಳ್ಳ ಮಠದ ಶ್ರೀಗಳ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಆರೋಪದಡಿ 8 ಜನರ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಣಸಿಕೊಳ್ಳ ಮಠದ ಶ್ರೀ ಶಿದ್ಧಬಸವ ಶ್ರೀಗಳ ಮೇಲೆ ಮಠದ ಪಕ್ಕದ ಮನೆಯವರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಆನಂದ ಮೇದಾರ, ರತ್ನಾ ಮೇದಾರ, ಮಂಜುನಾಥ, ಪ್ರವೀಣ್ ಮೇದಾರ ಸೇರಿದಂತೆ ಒಟ್ಟು 8 ಜನರ ವಿರುದ್ಧ ದೂರು ದಾಖಲಾಗಿದೆ.ಮಠದ ಆವರಣದಲ್ಲಿ ಮೇದಾರ ಕುಟುಂಬ ಕಾರನ್ನು ನಿಲ್ಲಿಸಿತ್ತು. ರಾತ್ರಿ ವೇಳೆ ಕಾರನ್ನು ಹೊರತೆಗೆದುಕೊಳ್ಳುವ ಸಂದರ್ಭದಲ್ಲಿ ಮಠದ ಗೇಟ್ ತೆರೆಯುವ ವಿಚಾರವಾಗಿ ಮಠದ ಸೇವಕರೊಂದಿಗೆ ವಾಗ್ವಾದ ನಡೆದಿದೆ.ವಾದ, ವಿವಾದ ತೀವ್ರಗೊಂಡು ಸ್ವಾಮೀಜಿಯವರೊಂದಿಗೆ ಸಹ ಮಾತಿನ ಚಕಮಕಿ ನಡೆದಿದೆ. ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡು ಶ್ರೀಗಳ ಮೇಲೆ ಹಲ್ಲೆಗೆ ಯತ್ನ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
