ಧಾರವಾಡ- ದೇಶದ ಭದ್ರತೆಗೆ ಕಂಟಕಪ್ರಾಯರಾಗಿರುವ ಮತ್ತು ಅಮಾಯಕರ ರಕ್ತ ಹರಿಸಲು ಸಂಚು ರೂಪಿಸುವ ಶಂಕಿತ ಉಗ್ರರನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಹುವಚನದಲ್ಲಿ ಸಂಬೋಧಿಸಿ ಗೌರವ ನೀಡಿರುವುದು ತೀವ್ರ ಖಂಡನೀಯ. ಇದು ಕಾಂಗ್ರೆಸ್ ಪಕ್ಷದ ವಿಕೃತ ಮನಸ್ಥಿತಿ ಮತ್ತು ದೇಶವಿರೋಧಿ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದ ಭದ್ರತೆಗಾಗಿ ಪ್ರಾಣವನ್ನು ಪಣಕ್ಕಿಟ್ಟು ಗಡಿಯಲ್ಲಿ ಹೋರಾಡುವ ಸೈನಿಕರನ್ನು ಹಾಗೂ ದೇಶದ ಹಿತ ಕಾಯುವ ದೇಶ ಭಕ್ತರನ್ನು ಏಕವಚನದಲ್ಲಿ ನಿಂದಿಸುವ ಕಾಂಗ್ರೆಸ್ ನಾಯಕರಿಗೆ, ದೇಶದ ಒಳಗೆ ಬಾಂಬ್ ಇಡಲು ಸಂಚು ರೂಪಿಸುವ ಶಂಕಿತ ಉಗ್ರರು ಕಂಡರೆ ಎಲ್ಲಿಲ್ಲದ ಗೌರವ ಮತ್ತು ಆದರ ಮೂಡುತ್ತಿರುವುದು ದುರದೃಷ್ಟಕರ. ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಉಗ್ರರಿಗೆ ʼಅವರು’, ‘ಇವರು’ ಎಂದು ಬಹುವಚನದ ಗೌರವ ನೀಡಿರುವುದು ಆಕಸ್ಮಿಕವಾಗಿ ನೀಡಿದ ಹೇಳಿಕೆಯಲ್ಲ. ಇದು ಕಾಂಗ್ರೆಸ್ ಪಕ್ಷದ ರಕ್ತದಲ್ಲೇ ಹರಿದು ಬಂದಿರುವ ವೋಟ್ ಬ್ಯಾಂಕ್ ಹಾಗೂ ತುಷ್ಟೀಕರಣ ರಾಜಕಾರಣದ ಪರಮಾವಧಿಯಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇಂತಹ ದೇಶವಿರೋಧಿ ಶಕ್ತಿಗಳಿಗೆ ಪರೋಕ್ಷ ಬೆಂಬಲ ಸಿಗುತ್ತಿದೆ ಎಂಬುದಕ್ಕೆ ಸಚಿವರ ಈ ಬೇಜವಾಬ್ದಾರಿಯುತ ಹೇಳಿಕೆಯೇ ಪ್ರತ್ಯಕ್ಷ ಸಾಕ್ಷಿ. ಒಬ್ಬ ಜವಾಬ್ದಾರಿಯುತ ಸಚಿವರಾಗಿ ಕಾನೂನು ಮತ್ತು ರಾಜ್ಯದ ಭದ್ರತೆಯ ಪರವಾಗಿ ನಿಲ್ಲಬೇಕಾದ ಪ್ರಿಯಾಂಕ್ ಖರ್ಗೆ ಅವರು, ಉಗ್ರರ ಪರವಾಗಿ ಮೃದು ಧೋರಣೆ ಹೊಂದಿರುವುದು ಅಕ್ಷಮ್ಯ ಅಪರಾಧವಾಗಿದೆ. ಉಗ್ರರಿಗೆ ಗೌರವದ ಸ್ಥಾನ ನೀಡುವ ಮೂಲಕ ಸಮಾಜಕ್ಕೆ ಮತ್ತು ತಮ್ಮ ಪಕ್ಷದ ಕಾರ್ಯಕರ್ತರಿಗೆ ಇವರು ಯಾವ ರೀತಿಯ ಸಂದೇಶವನ್ನು ನೀಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಭದ್ರತೆ ಮತ್ತು ಸಾರ್ವಜನಿಕರ ಶಾಂತಿಯನ್ನು ಪಣಕ್ಕಿಟ್ಟು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಈ ಧೋರಣೆಯನ್ನು ದೇಶದ ಜನರು ಎಂದಿಗೂ ಕ್ಷಮಿಸುವುದಿಲ್ಲ. ಸಚಿವರು ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ದೇಶದ ಭದ್ರತೆ ವಿಷಯದಲ್ಲಿ ಕಾಂಗ್ರೆಸ್ ಇದೇ ರೀತಿಯಲ್ಲಿ ರಾಜಿಯಾಗುತ್ತಿದ್ದರೆ, ಹೋರಾಟ ನಡೆಸಲಾಗುವುದು ಎಂದು ಶಾಸಕರಾದ ಶ್ರೀ ಅರವಿಂದ ಬೆಲ್ಲದ ಎಚ್ಚರಿಸಿದ್ದಾರೆ.
