Belagavi

ಶಿವಸೇನೆ ನೆಂಟು ಬೆಳೆಸುತ್ತಿರುವ ಸಿಎಂ ಡಿ.ಕೆ.ಶಿ ಎಂ.ಇ.ಎಸ್ ಬ್ಯಾನ್ ಮಾಡಲ್ಲ…ಬಿಡಿ…

Share

ಗಡಿಭಾಗದಲ್ಲಿ ಕನ್ನಡ ಭಾಷೆ ಮಾಯವಾಗುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಜುಲೈ 15ರ ಒಳಗಾಗಿ ಎಂ.ಇ.ಎಸ್. ಸಂಘಟನೆಯನ್ನು ರದ್ದುಗೊಳಿಸದಿದ್ದರೆ ಒಂದು ಸಾವಿರ ವಾಹನಗಳೊಂದಿಗೆ ಬೆಳಗಾವಿಗೆ ಮುತ್ತಿಗೆ ಹಾಕುವುದಾಗಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಅಲ್ಲದೇ ಶಿವಸೇನೆಯನ್ನು ನೆಂಟು ಬೆಳೆಸಲು ಮಹಾರಾಷ್ಟ್ರಕ್ಕೆ ಹೋಗುವ ಸಿಎಂ ಡಿ.ಕೆ.ಶಿವಕುಮಾರ್ ಎಂ.ಇ.ಎಸ್ ಬ್ಯಾನ್ ಮಾಡಲ್ಲ ಎಂದು ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಬೆಳಗಾವಿ, ಸೊಲ್ಲಾಪುರ ಹಾಗೂ ಅಕ್ಕಲಕೋಟೆಗಳಲ್ಲಿ ಕನ್ನಡ ಭಾಷೆ ದಿನೇ ದಿನೇ ಮಾಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಕೇವಲ ಬೇಜವಾಬ್ದಾರಿ ಮಾತುಗಳನ್ನಾಡುತ್ತಾ ತಮ್ಮ ಸ್ಥಾನಕ್ಕೆ ಅಗೌರವ ತರುತ್ತಿವೆ ಎಂದು ಕಿಡಿಕಾರಿದ ಅವರು, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಇಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಗತ್ಯವೇನಿದೆ? ಬೇಕಿದ್ದರೆ ಅವರು ಮಹಾರಾಷ್ಟ್ರದಲ್ಲಿ ರಾಜಕಾರಣ ಮಾಡಿಕೊಳ್ಳಲಿ ಎಂದರು. ಎಂ.ಇ.ಎಸ್. ರದ್ದುಗೊಳಿಸಲು ಮೊದಲಿನಿಂದಲೂ ಹೋರಾಟ ನಡೆಯುತ್ತಿದ್ದರೂ ಸರ್ಕಾರಗಳು ಕೇವಲ ಆಶ್ವಾಸನೆ ನೀಡುತ್ತಿವೆ. ಗೃಹ ಸಚಿವರಿಗೆ ನಿಜಕ್ಕೂ ತಾಕತ್ತಿದ್ದರೆ ತಕ್ಷಣ ಎಂ.ಇ.ಎಸ್. ರದ್ದುಗೊಳಿಸಿ, ಅದರ ನಾಯಕರನ್ನು ಗಡಿಪಾರು ಮಾಡಿ ಕಾರ್ಯಾಲಯವನ್ನು ಖಾಲಿ ಮಾಡಿಸಲಿ ಎಂದು ಸವಾಲು ಹಾಕಿದರು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂದು ನಿರ್ಣಯ ಮಂಡಿಸಬೇಕೆಂದು ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಹೋರಾಟ ನೂರು ದಿನ ಕಳೆದರೂ ಸರ್ಕಾರಕ್ಕೆ ಗೌರವವಿಲ್ಲ ಎಂದು ವಾಟಾಳ್ ನಾಗರಾಜ್ ಆಕ್ರೋಶ ಹೊರಹಾಕಿದರು. ಸರ್ಕಾರ ಕೂಡಲೇ ಮಹಾಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಕು, ಈ ಕೆಲಸ ಸಿದ್ದರಾಮಯ್ಯನವರ ಕಾಲದಲ್ಲೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಶಿವಸೇನೆಯನ್ನು ಕಾಣಲು ಮಹಾರಾಷ್ಟ್ರಕ್ಕೆ ಹೋಗುವ ಡಿ.ಕೆ.ಶಿವಕುಮಾರ್ ಅವರು ಅಲ್ಲಿ ನೆಂಟು ಬೆಳಿಸುತ್ತಿದ್ದಾರೆ. ಅವರು ಎಂ.ಇ.ಎಸ್ ಬ್ಯಾನ್ ಮಾಡಲ್ಲ. ಈ ಎಲ್ಲಾ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಜುಲೈ 15ರೊಳಗಾಗಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಬೆಳಗಾವಿಗೆ ಮುತ್ತಿಗೆ ಹಾಕಲಾಗುವುದು ಮತ್ತು ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 1 ಸಾವಿರ ವಾಹನಗಳು ಬೆಳಗಾವಿಗೆ ನುಗ್ಗಲಿವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Tags:

error: Content is protected !!