ರಾಜ್ಯ ಸರ್ಕಾರದ ವಿದ್ಯುತ್ ಖಾಸಗೀಕರಣ ನೀತಿಯನ್ನು ವಿರೋಧಿಸಿ ಬಾಗಲಕೋಟೆ ಜಿಲ್ಲೆಯಲ್ಲಿ ರೈತ ಮತ್ತು ನೇಕಾರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಹೆಸ್ಕಾಂ ಸೇರಿದಂತೆ ರಾಜ್ಯದ ವಿದ್ಯುತ್ ನಿಗಮಗಳನ್ನು ಟಾಟಾ ಕಂಪನಿಗೆ ವಹಿಸುವುದನ್ನು ಕೈಬಿಡಬೇಕೆಂದು ಆಗ್ರಹಿಸಿ ಬನಹಟ್ಟಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬಾಗಲಕೋಟೆ ರಾಜ್ಯ ಸರ್ಕಾರದ ವಿದ್ಯುತ್ ನಿಗಮಗಳ ಖಾಸಗೀಕರಣ ನೀತಿಯನ್ನು ಖಂಡಿಸಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ತಹಸೀಲ್ದಾರ್ ಕಚೇರಿಯ ಮುಂದೆ ವಿವಿಧ ರೈತ ಹಾಗೂ ನೇಕಾರ ಸಂಘಟನೆಗಳು ಒಗ್ಗೂಡಿ ತೀವ್ರ ಪ್ರತಿಭಟನೆ ನಡೆಸಿದವು. ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂ ಹಾಗೂ ಚೆಸ್ಕಾಂನಂತಹ ಸಾರ್ವಜನಿಕ ವಿದ್ಯುತ್ ನಿಗಮಗಳನ್ನು ಯಾವುದೇ ಕಾರಣಕ್ಕೂ ಖಾಸಗಿ ಕಂಪನಿಗಳಿಗೆ ವಹಿಸಬಾರದು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು. ಈಗಾಗಲೇ ಶಿಕ್ಷಣ ಕ್ಷೇತ್ರವನ್ನು ಜನಸಾಮಾನ್ಯರಿಂದ ವಂಚಿತಗೊಳಿಸಲಾಗುತ್ತಿದ್ದು, ಇದೀಗ ವಿದ್ಯುತ್ ಕ್ಷೇತ್ರವನ್ನೂ ಖಾಸಗೀಕರಣಗೊಳಿಸುವ ಮೂಲಕ ಬಡವರ ಮತ್ತು ರೈತರ ಸೌಲಭ್ಯಗಳನ್ನು ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ವೇಳೆ ವಿದ್ಯುತ್ ನಿಗಮಗಳು ಖಾಸಗೀಕರಣಗೊಂಡರೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಜ್ಯೋತಿ, ಭಾಗ್ಯಜ್ಯೋತಿ, ಅಕ್ರಮ-ಸಕ್ರಮ ಯೋಜನೆ ಹಾಗೂ ಸಣ್ಣ ರೈತರಿಗೆ ಸಿಗುತ್ತಿರುವ 10 HP ವರೆಗಿನ ಉಚಿತ ವಿದ್ಯುತ್ ಸಬ್ಸಿಡಿ ಸೌಲಭ್ಯಗಳು ಸಂಪೂರ್ಣವಾಗಿ ವಂಚಿತವಾಗಲಿವೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು. ಸಾವಿರಾರು ಕೋಟಿ ರೂಪಾಯಿಗಳ ಸರ್ಕಾರಿ ಸೌಲಭ್ಯಗಳಿಂದ ಜನರನ್ನು ದೂರವಿಡಲು ಈ ರೈತ ವಿರೋಧಿ ನೀತಿಯನ್ನು ತರಲಾಗುತ್ತಿದೆ ಎಂದು ದೂರಿದ ನೇಕಾರ ಸಂಘಟನೆಯ ರಾಜ್ಯಾಧ್ಯಕ್ಷ ಶಿವಲಿಂಗ ಹಾಗೂ ರೈತ ಹೋರಾಟಗಾರರು, ಸರ್ಕಾರ ತಕ್ಷಣವೇ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
