ನಗರದಲ್ಲಿ ಅಕ್ರಮ ಜೂಜಾಟ ಮತ್ತು ಮಾದಕ ದ್ರವ್ಯ ವ್ಯಸನಿಗಳ ವಿರುದ್ಧ ಬೆಳಗಾವಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದು, ಪ್ರತ್ಯೇಕ ಮೂರು ದಾಳಿಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಿನಾಂಕ 10/06/2026 ರಂದು ಬೆಳಗಾವಿ ಗ್ರಾಮೀಣ ಠಾಣೆಯ ಪಿಎಸ್ಐ ಸಂತೋಷ್ ದಳವಾಯಿ ಹಾಗೂ ಸಿಬ್ಬಂದಿ ನಡೆಸಿದ ದಾಳಿಯಲ್ಲಿ, ಕೆಎಸ್‌ಆರ್‌ಪಿ 2ನೇ ಬಟಾಲಿಯನ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಓಸಿ ಆಟ ಆಡಿಸುತ್ತಿದ್ದ ನವೀನ ಹನುಮಂತ ಕಡಕೋಳ (30) ಎಂಬಾತನನ್ನು ನಗದು ಹಾಗೂ ಸಾಮಗ್ರಿಗಳ ಸಮೇತ ಬಂಧಿಸಿ ಪ್ರಕರಣ ಸಂಖ್ಯೆ 151/2026 ರಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಅದೇ ದಿನ ಮಾರ್ಕೆಟ್ ಠಾಣೆಯ ಎಎಸ್ಐ ಶಂಕರ ಶಿಂದೆ ನೇತೃತ್ವದ ತಂಡವು ಭಾಂದೂರ ಗಲ್ಲಿಯಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಸಮರ್ಥ ಭಗವಂತ ನವಲಿ (21) ಎಂಬಾತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಗಾಂಜಾ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಕರಣ ಸಂಖ್ಯೆ 145/2026 ರಡಿ ಬಂಧಿಸಿದೆ. ಇದರೊಂದಿಗೆ, ಶಹಾಪುರ ಠಾಣೆಯ ಪಿಐ ಎಸ್. ಎಸ್. ಸೀಮಾನಿ ನೇತೃತ್ವದ ತಂಡವು ಫ್ಯಾಟನ್ ಶೋ-ರೂಮ್ ಹತ್ತಿರ ಮಾದಕ ವಸ್ತು ಸೇವಿಸುತ್ತಿದ್ದ ಶಂಕರ ಮಾರುತಿ ಗೊಲ್ಲರ (26) ಮತ್ತು ಸದಾಶಿವ ಗೌರೇಶ ಪೂಜಾರಿ (26) ಎಂಬಿಬ್ಬರನ್ನು ವೈದ್ಯಕೀಯ ತಪಾಸಣೆಯ ಆಧಾರದ ಮೇಲೆ ಪ್ರಕರಣ ಸಂಖ್ಯೆ 85/2026 ರಡಿ ಅರೆಸ್ಟ್ ಮಾಡಿದೆ. ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಪಿಐ, ಪಿಎಸ್ಐ, ಎಎಸ್ಐ ಮತ್ತು ಸಿಬ್ಬಂದಿಯ ದಕ್ಷ ಕೆಲಸವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

