ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ಕೆಬಿಜೆಎನ್ಎಲ್ನ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕೆಬಿಜೆಎನ್ಎಲ್ ಉಪ ವಿಭಾಗ ಸಂಖ್ಯೆ-1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೇವುಲಾಲ್ ಚವ್ಹಾಣ ಹಾಗೂ ಕಿರಿಯ ಅಭಿಯಂತರ ಸಾತಲಿಂಗಪ್ಪ ರೋಡಗಿ ಅವರು ಕೆನಾಲ್ ಕಾಮಗಾರಿಯ 3,71,419 ರೂ. ಬಿಲ್ ಪಾವತಿಗಾಗಿ ಒಟ್ಟು 18 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರಲ್ಲಿ ಸೇವುಲಾಲ್ ಚವ್ಹಾಣ 10 ಸಾವಿರ ರೂ. ಹಾಗೂ ಸಾತಲಿಂಗಪ್ಪ ರೋಡಗಿ 8 ಸಾವಿರ ರೂ. ಲಂಚ ಕೇಳಿದ್ದಾಗಿ ಆರೋಪಿಸಲಾಗಿದೆ. ಈ ಸಂಬಂಧ ಗುತ್ತಿಗೆದಾರ ನಾನಾಸಾಹೇಬ್ ರೂಡಗಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲಂಚದ ಹಣದ ಸಮೇತ ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದಾರೆ. ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ಕುರಿತು ವಿಜಯಪುರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

