ಬೆಳಗಾವಿಯಲ್ಲಿ ಮಾದಕ ವಸ್ತುಗಳ ಜಾಲದ ವಿರುದ್ಧ ಸಿಸಿಬಿ ಪೊಲೀಸರು ಮಹತ್ತರ ಕಾರ್ಯಾಚರಣೆ ನಡೆಸಿದ್ದಾರೆ. ಮುತಗಾ-ಶಿಂದೊಳ್ಳಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಹೆರಾಯಿನ್ ಮಾರಾಟ ಮಾಡುತ್ತಿದ್ದ ಯುವಕನನ್ನು ಹೆಡೆಮುರ್ಕಟ್ಟಿರುವ ಪೊಲೀಸರು, ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಜಾಲದ ಹಿಂದೆ ಮುಂಬೈ ಮೂಲದ ಮಹಿಳೆ ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬೆಳಗಾವಿ ಮುತಗಾ-ಶಿಂದೊಳ್ಳಿ ರಸ್ತೆಯ ಪಕ್ಕದ ಗಿಡಗಂಟಿಗಳಿರುವ ಸಾರ್ವಜನಿಕ ಸ್ಥಳದಲ್ಲಿ ಹೆರಾಯಿನ್ ಮಾರಾಟ ಮಾಡುತ್ತಿದ್ದ ಆರೋಪಿ ಸಮೀರ ಮಹಮ್ಮದಶರೀಪ ಮುಲ್ಲಾ (21) ಎಂಬಾತನನ್ನು ಮೇ 27 ರಂದು ಸಿಸಿಬಿ ಪಿಐ ಮಂಜುನಾಥ ನಾಯಿಕ ಮಾರ್ಗದರ್ಶನದಲ್ಲಿ ಪಿಎಸ್ಐ ಮಂಜುನಾಥ ಭಜಂತ್ರಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತನಿಂದ 3,28,000 ರೂ. ಮೌಲ್ಯದ 16.40 ಗ್ರಾಂ ಹೆರಾಯಿನ್, 5,000 ರೂ. ಮೌಲ್ಯದ ಇನ್ಫಿನಿಕ್ಸ್ ಮೊಬೈಲ್ ಹಾಗೂ 220 ರೂ. ನಗದು ಸೇರಿದಂತೆ ಒಟ್ಟು 3,33,220 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ಈ ಮಾದಕ ವಸ್ತುವನ್ನು ಮುಂಬೈನ ಸಾಯಿನ್ ಕೋಳವಾಡ ನಿವಾಸಿ ಸಾವಂತಿ ಅಮ್ಮ ಎಂಬಾಕೆಯಿಂದ ತಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಆರೋಪಿಗಳ ವಿರುದ್ಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರ.ಸಂ. 68/2026, ಕಲಂ 21(b) ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ದಂಧೆಯ ಕಿಂಗ್ಪಿನ್ ಪತ್ತೆಗೆ ತನಿಖೆ ಮುಂದುವರಿದಿದೆ. ಸಿಸಿಬಿ ಪೊಲೀಸರ ಈ ಚಾಣಾಕ್ಷತನದ ಕಾರ್ಯಾಚರಣೆಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಶ್ಲಾಘಿಸಿದ್ದಾರೆ.

