ಬೆಳಗಾವಿಯಲ್ಲಿ ಐಪಿಎಲ್ ಪಂದ್ಯಾವಳಿಗಳ ಹೆಸರಿನಲ್ಲಿ ನಡೆಯುತ್ತಿದ್ದ ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯನ್ನು ಮಾರ್ಕೆಟ್ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲೇ ಸಾರ್ವಜನಿಕರಿಂದ ಹಣ ಪಡೆದು ಜೂಜಾಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು, ಓರ್ವ ಆರೋಪಿಯನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಬೆಳಗಾವಿಯ ಹಳೆ ಭಾಜಿ ಮಾರ್ಕೆಟ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಆನ್ಲೈನ್ ಮುಖಾಂತರ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದ ಆರೋಪಿ ವಿಶಾಲ ಆಧಿನಾಥ ಗೌರಗೊಂಡ (43) ಎಂಬಾತನನ್ನು ಮಾರ್ಕೆಟ್ ಪೊಲೀಸ್ ಠಾಣೆಯ ಪಿಎಸ್ಐ ಶಶಿಕುಮಾರ ಕುರಳೆ ಹಾಗೂ ಸಿಬ್ಬಂದಿಯವರು ಬುಧವಾರ (ಮೇ 27) ಯಶಸ್ವಿಯಾಗಿ ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತ ಆರೋಪಿಯು ಮತ್ತೊಬ್ಬ ತಲೆಮರೆಸಿಕೊಂಡಿರುವ ಆರೋಪಿ ಉತ್ತಮ ರವಿ ಜಾಧವ ಎಂಬಾತನ ಪರವಾಗಿ ಮೊಬೈಲ್ ಬಳಸಿ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಜೂಜಾಟದಲ್ಲಿ ತೊಡಗಿದ್ದ ಎನ್ನಲಾಗಿದೆ. ದಾಳಿ ವೇಳೆ ಪೊಲೀಸರು ಬಂಧಿತನಿಂದ 4,000 ರೂ. ಮೌಲ್ಯದ ಒಪ್ಪೋ ರೆನೋ ಮೊಬೈಲ್ ಹಾಗೂ 1,500 ರೂ. ನಗದು ಸೇರಿದಂತೆ ಒಟ್ಟು 5,500 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಇಬ್ಬರೂ ಆರೋಪಿಗಳ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರ.ಸಂ. 123/2026, ಕಲಂ 78(1)(a)(vi) ಕೆ.ಪಿ. ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸಮಯೋಚಿತವಾಗಿ ದಾಳಿ ನಡೆಸಿ ದಂಧೆ ಬಯಲಿಗೆಳೆದ ಪಿಎಸ್ಐ ಮತ್ತು ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

