Bagalkot

ಬಾಗಲಕೋಟೆಯಲ್ಲಿ ಭೀಕರ ಡೀಸೆಲ್ ಅಭಾವ: ಬಂಕ್‌ಗಳ ಮುಂದೆ ‘ನೋ ಸ್ಟಾಕ್’ ಬೋರ್ಡ್; ಕ್ಯಾನು ಹಿಡಿದು ರಸ್ತೆಗಿಳಿದ ಅನ್ನದಾತರು!

Share

ಬಾಗಲಕೋಟೆ ಜಿಲ್ಲೆಯಲ್ಲಿ ಇಂಧನ ದರ ಏರಿಕೆಯ ಬಿಸಿಯ ಬೆನ್ನಲ್ಲೇ ಈಗ ಡೀಸೆಲ್ ಅಭಾವದ ದೊಡ್ಡ ಶಾಕ್ ಎದುರಾಗಿದೆ. ಜಿಲ್ಲೆಯ ಇಳಕಲ್ಲ ನಗರ ಸೇರಿದಂತೆ ಸುತ್ತಮುತ್ತಲಿನ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ‘ಡೀಸೆಲ್ ನೋ ಸ್ಟಾಕ್’ ಬೋರ್ಡ್‌ಗಳು ಪ್ರತ್ಯಕ್ಷವಾಗಿದ್ದು, ಇಂಧನ ಸಿಗದೆ ವಾಹನ ಸವಾರರು ಹಾಗೂ ರೈತರು ದಿಕ್ಕುತೋಚದಂತಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ಲ ನಗರದಲ್ಲಿ ಡೀಸೆಲ್ ಕೊರತೆ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಳೆದ 3-4 ದಿನಗಳಿಂದ ನಗರದ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಸಂಪೂರ್ಣ ಖಾಲಿಯಾಗಿದ್ದು, ಬಂಕ್ ಮಾಲೀಕರು ನೋ ಸ್ಟಾಕ್ ಬೋರ್ಡ್‌ಗಳನ್ನು ತೂಗುಹಾಕಿದ್ದಾರೆ. ಸದ್ಯ ಕೃಷಿ ಚಟುವಟಿಕೆಗಳ ಸಮಯವಾಗಿರುವುದರಿಂದ ಟ್ರ್ಯಾಕ್ಟರ್ ಹಾಗೂ ಇತರೆ ಯಂತ್ರೋಪಕರಣಗಳಿಗೆ ಡೀಸೆಲ್ ಇಲ್ಲದೆ ಅನ್ನದಾತರು ಕಂಗಾಲಾಗಿದ್ದಾರೆ. ಡೀಸೆಲ್ ಸಿಗುತ್ತಿಲ್ಲ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಇಳಕಲ್ಲ ನಗರದ ಬಂಕ್‌ಗಳಿಗೆ ನೂರಾರು ರೈತರು ಕೈಯಲ್ಲಿ ಕ್ಯಾನುಗಳನ್ನು ಹಿಡಿದುಕೊಂಡು ಲಗ್ಗೆ ಇಡುತ್ತಿದ್ದು, ಇಂಧನಕ್ಕಾಗಿ ತೀವ್ರ ಪರದಾಟ ನಡೆಸುವಂತಾಗಿದೆ.

ಇತ್ತ ಡೀಸೆಲ್ ಸಿಗದೆ ಲಾರಿ, ಬಸ್ ಹಾಗೂ ವಾಣಿಜ್ಯ ವಾಹನಗಳ ಸಂಚಾರಕ್ಕೂ ತೀವ್ರ ಅಡ್ಡಿಯಾಗಿದ್ದು, ಸಾರಿಗೆ ವಲಯ ಸ್ತಬ್ಧಗೊಳ್ಳುವ ಭೀತಿ ಮೂಡಿದೆ. ಈಗಾಗಲೇ ಇಂಧನ ದರ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ, ಈ ಹಠಾತ್ ಅಭಾವವು ಮತ್ತಷ್ಟು ಆತಂಕ ಮೂಡಿಸಿದೆ. ತೈಲ ಕಂಪನಿಗಳು ಮುಂಬರುವ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಮತ್ತಷ್ಟು ಹೆಚ್ಚಳ ಮಾಡಲು ಈ ರೀತಿಯ ಕೃತಕ ಅಭಾವ ಸೃಷ್ಟಿಸುತ್ತಿವೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶಿಸಿ ಇಂಧನ ಪೂರೈಕೆಯನ್ನು ಸರಿಪಡಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

Tags:

error: Content is protected !!