ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಮತ್ತೆ ಹಳೇ ಕಳ್ಳರ ಗ್ಯಾಂಗ್ ಪ್ರತ್ಯಕ್ಷವಾಗಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಮುಖಕ್ಕೆ ಮಾಸ್ಕ್ ಧರಿಸಿ, ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದು ಓಡಾಡುತ್ತಿರುವ ಖದೀಮರ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಜಯನಗರ ಬಡಾವಣೆಯಲ್ಲಿ ತಡರಾತ್ರಿ ‘ಮಾಸ್ಕ್ ಗ್ಯಾಂಗ್’ ಭೀತಿ ಎದುರಾಗಿದೆ. ಮುಖಕ್ಕೆ ಮಾಸ್ಕ್ ಹಾಗೂ ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದು ಬಂದಿದ್ದ ಕಳ್ಳರು, ಒಂಟಿ ಮನೆಗಳ ಸುತ್ತಮುತ್ತ ಇಣುಕಿ ನೋಡಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಬಡಾವಣೆಯ ಒಂದು ಮನೆಯ ಬೀಗ ಮುರಿದು ಒಳನುಗ್ಗಿದ ಖದೀಮರು, ಅದೃಷ್ಟವಶಾತ್ ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಸಿಗದ ಹಿನ್ನೆಲೆಯಲ್ಲಿ ಬರಿಗೈಲಿ ವಾಪಸ್ ಆಗಿದ್ದಾರೆ. ಕಳ್ಳರ ಈ ಎಲ್ಲಾ ಚಲನವಲನಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಲೈವ್ ಆಗಿ ಸೆರೆಯಾಗಿದ್ದು, ಸದ್ಯ ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಿಂದ ನಗರದ ಜನರಲ್ಲಿ ತೀವ್ರ ಭಯದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ರಾತ್ರಿ ಗಸ್ತನ್ನು ಹೆಚ್ಚಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

