ಬಡವರ ಪಾಲಿನ ಅಕ್ಷರ ದೇಗುಲಗಳಾಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರದ ವಿರುದ್ಧ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಶಿಂದೊಳ್ಳಿ ಸರ್ಕಾರಿ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಮಾಸ್ತಮರಡಿ ಶಾಲೆಗೆ ವಿಲೀನಗೊಳಿಸುವುದನ್ನು ಖಂಡಿಸಿ, ಎಐಡಿಎಸ್ಓ ಹಾಗೂ ಗ್ರಾಮಸ್ಥರು ಶಾಲೆಯ ಮುಂಭಾಗದಲ್ಲೇ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

‘ನಮ್ಮೂರ ಶಾಲೆ ನಮ್ಮಯ ಕಣ್ಮಣಿ’ ಎಂಬ ಬ್ಯಾನರ್ ಕಟ್ಟಿ, ಮಹಾತ್ಮ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಗಳನ್ನು ಹಿಡಿದು ನೂರಾರು ಪೋಷಕರು ಮತ್ತು ವಿದ್ಯಾರ್ಥಿಗಳು ಶಿಂದೊಳ್ಳಿ ಶಾಲೆಯ ಮುಂಭಾಗದಲ್ಲಿ ಧರಣಿ ನಡೆಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಪೋಷಕರಾದ ರಮಾ ನಾಗಣ್ಣವರ್ ಹಾಗೂ ಲಕ್ಷ್ಮೀ ಕರೇಗಾರ್, “ನಾವು ದಿನಗೂಲಿ ಮಾಡಿ ಬದುಕುವ ಬಡ ಜನ. ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸುವ ಆರ್ಥಿಕ ಸಾಮರ್ಥ್ಯ ನಮಗಿಲ್ಲ. ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ನಮ್ಮೂರ ಶಾಲೆ ಮುಚ್ಚಿ ಮಕ್ಕಳನ್ನು ಬೇರೆ ಊರಿಗೆ ಕಳುಹಿಸಿದರೆ ಅವರ ಸುರಕ್ಷತೆಯ ಜವಾಬ್ದಾರಿ ಯಾರದ್ದು?” ಎಂದು ಕಣ್ಣೀರಿಡುತ್ತಾ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಯಾರೇ ಬಂದರೂ ಯಾವುದೇ ಕಾರಣಕ್ಕೂ ಊರಿನ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ತಾಯಂದಿರು ಕಟ್ಟುನಿಟ್ಟಿನ ಪ್ರತಿರೋಧ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಡಿಎಸ್ಓ ಜಿಲ್ಲಾ ಸಂಚಾಲಕ ಮಹಾಂತೇಶ ಬಿಳೂರ್ ಮಾತನಾಡಿ, ಶಿಕ್ಷಣಕ್ಕೆ 8 ಗ್ಯಾರಂಟಿಗಳನ್ನು ಘೋಷಿಸಿರುವ ರಾಜ್ಯ ಸರ್ಕಾರ, ತೆರೆಮರೆಯಲ್ಲಿ ಕೆಪಿಎಸ್ ಶಾಲೆಗಳ ಮೇಲುಸ್ತುವಾರಿಯನ್ನು ಖಾಸಗಿಯವರಿಗೆ ವಹಿಸಿ ಶಿಕ್ಷಣದ ವ್ಯಾಪಾರೀಕರಣ ಮಾಡಲು ಹುನ್ನಾರ ನಡೆಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆ ಬಳಿಕ ನಿಲಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸತೀಶ್ ಶಾಪೂರಕರ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಮನವಿ ಸ್ವೀಕರಿಸಿದ ಅವರು, “ಶಾಲೆ ಮುಚ್ಚುವುದು ಬಡವರಿಗೆ ಮಾಡುವ ಅನ್ಯಾಯ. ಈ ಯೋಜನೆಗೆ ನಮ್ಮ ಪಂಚಾಯಿತಿಯ ಸಂಪೂರ್ಣ ವಿರೋಧವಿದ್ದು, ಗ್ರಾಮಸ್ಥರ ಕೂಗನ್ನು ಶಿಕ್ಷಣ ಇಲಾಖೆ ಹಾಗೂ ಸರ್ಕಾರದ ಗಮನಕ್ಕೆ ತರಲಾಗುವುದು” ಎಂದು ಭರವಸೆ ನೀಡಿದ್ದಾರೆ.
ಶಾಂತಾ ಶಾಪೂರಕರ್, ಶಾಂತಾ ತಿಪ್ಪಣ್ಣಗೋಳ, ಭರಮವ್ವ ಶಾಪೂರಕರ್, ಲಕ್ಷ್ಮೀ ಶಾಪೂರಕರ್, ಬಾಳವ್ವ ಅಗಸೀಮನಿ, ಮಾಳಿಂಗರಾಯ ತಿಪ್ಪಣ್ಣಗೋಳ, ಭಾವಕಣ್ಣ ಕಣಬರಕರ್ ಸೇರಿದಂತೆ ಪೋಷಕರು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
