ಹುಬ್ಬಳ್ಳಿ ನಗರದ ಬಸ್ ನಿಲ್ದಾಣದಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ಭಾಗಗಳಿಂದ ಬಂದು ಬೇರೆ ನಗರಗಳಿಗೆ ತೆರಳುತ್ತಿದ್ದ ನೂರಾರು ಕಾರ್ಮಿಕರನ್ನು ಬಲವಂತವಾಗಿ ಅಸೂಚಿವಾದ ನೆಲದ ಮೇಲೆ ಕೂರಿಸಿ, ಶಾಸಕ ಮಹೇಶ ಟೆಂಗಿನಕಾಯಿ ಅವರು ನೈತಿಕ ಪೊಲೀಸರಂತೆ ಅಮಾನವೀಯವಾಗಿ ವಿಚಾರಣೆ ನಡೆಸಿರುವ ಘಟನೆ ಅತ್ಯಂತ ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು ಒಬ್ಬ ಜನಪ್ರತಿನಿಧಿಯಾಗಿ ಬಡ ಕಾರ್ಮಿಕರೊಂದಿಗೆ ಈ ರೀತಿ ಅತ್ಯಂತ ಅಸಭ್ಯವಾಗಿ ನಡೆದುಕೊಂಡು, ಅವರ ಮಾನವ ಹಕ್ಕುಗಳನ್ನು ಬಹಿರಂಗವಾಗಿ ಉಲ್ಲಂಘಿಸಿರುವುದು ಇಡೀ ಸಮಾಜ ತಲೆತಗ್ಗಿಸುವಂತಹ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

“ನಾಳೆ ಹುಬ್ಬಳ್ಳಿಯ ರಸ್ತೆ, ಕೈಗಾರಿಕೆ ಕೆಲಸ ಮಾಡಲು ಬಿಜೆಪಿ ಶಾಸಕರು ಬರ್ತಾರಾ?”
ಬಿಜೆಪಿಯ ಬೂಟಾಟಿಕೆ ರಾಜಕಾರಣವನ್ನು ತೀವ್ರವಾಗಿ ಪ್ರಶ್ನಿಸಿದ ಅವರು, “ಭಾರತ ದೇಶದ ಕಾರ್ಮಿಕರನ್ನು ಈ ರೀತಿ ಅತ್ಯಂತ ಕೀಳಾಗಿ ಕಂಡರೆ, ನಾಳೆ ಹುಬ್ಬಳ್ಳಿಯ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಮಾಡುವವರು ಯಾರು? ನಮ್ಮ ರಸ್ತೆಗಳನ್ನು ನಿರ್ಮಿಸುವವರು ಯಾರು? ಅಥವಾ ಇಲ್ಲಿನ ಕೈಗಾರಿಕೆಗಳಲ್ಲಿ ಕಠಿಣ ಶ್ರಮ ವಹಿಸಿ ಕೆಲಸ ಮಾಡುವವರು ಯಾರು? ಕೇವಲ ರಾಜಕೀಯ ಲಾಭಕ್ಕಾಗಿ ಬೂಟಾಟಿಕೆಯ ನಾಟಕವಾಡುತ್ತಿರುವ ಶಾಸಕ ತೆಂಗಿನಕಾಯಿ ಹಾಗೂ ಅವರ ಬಿಜೆಪಿ ಕಾರ್ಯಕರ್ತರು ಬಂದು ಈ ಕಠಿಣ ಪರಿಶ್ರಮದ ಕೆಲಸಗಳನ್ನು ಮಾಡುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.
ಕಾರ್ಮಿಕ ವರ್ಗದವರೇ ಈ ನಾಡಿನ ನಿಜವಾದ ನಿರ್ಮಾತೃಗಳು. ತಮ್ಮ ಬೆವರಿನಿಂದ ದೇಶ ಕಟ್ಟುವ ಶ್ರಮಿಕರ ಗೌರವವನ್ನು ಮಣ್ಣು ಮಾಡುವ ಮತ್ತು ಅವರ ಮೇಲೆ ದಬ್ಬಾಳಿಕೆ ನಡೆಸುವ ಯಾವುದೇ ಅಧಿಕಾರ ಶಾಸಕರಿಗಾಗಲಿ ಅಥವಾ ಬಿಜೆಪಿ ಪಕ್ಷಕ್ಕಾಗಲಿ ಇಲ್ಲ ಎಂದರು.
