• ಹುಬ್ಬಳ್ಳಿಯಲ್ಲಿ ಅಂತರರಾಜ್ಯ ಭೀಕರ ಕಳ್ಳರ ಬಂಧನ
• ಕೋಟಿಗೂ ಅಧಿಕ ಮೌಲ್ಯದ ಆಭರಣ ವಶ
• ಇಬ್ಬರು ಕಳ್ಳರು ಅರೆಸ್ಟ್, ನಾಲ್ವರಿಗಾಗಿ ತಲಾಶ್
• ಧಾರವಾಡ, ಹಾವೇರಿ ಪೊಲೀಸರಿಂದ ಜಂಟಿ ಕಾರ್ಯಾಚರಣೆ

ಅಂತರರಾಜ್ಯ ಕಳ್ಳರನ್ನು ಬಂಧಿಸಿ, ಬಂಧಿತರಿಂದ 1 ಕೋಟಿ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕಿರೇಸೂರ ಗ್ರಾಮದಲ್ಲಿನ ಮನೆ ಕಳ್ಳತನ, ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಗಾರದ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವರಾಜ ಮೋಡಕೇರ, ಅಶೋಕ ಕೊಂಚಿಕೊರವರ ಎಂಬ ಆರೋಪಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 310 ಗ್ರಾಂ ಚಿನ್ನಾಭರಣ, 26 ಕೆ.ಜೆ. ಬೆಳ್ಳಿಯ ಆಭರಣ ಹಾಗೂ ತೆಲಂಗಾಣ ರಾಜ್ಯದಲ್ಲಿ ಬೋಲೆರೋ ವಾಹನ ಸೇರಿ ಒಟ್ಟು 1 ಕೋಟಿ 15 ಲಕ್ಷ ಮೌಲ್ಯದ ವಸ್ತುಗಳನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ, ನವಲಗುಂದ ಪೊಲೀಸ್ ಠಾಣೆ ಹಾಗೂ ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿಗಳ ನೇತೃತ್ವದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. 6 ಆರೋಪಿತರ ಪೈಕಿ 4 ಆರೋಪಿತರು ಪರಾರಿಯಾಗಿದ್ದು, ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.
ಧಾರವಾಡ ಹಾಗೂ ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಗ್ರಾಮೀಣ, ನವಲಗುಂದ ಹಾಗೂ ಹಾನಗಲ್ ಠಾಣೆ ಪೊಲೀಸ್ ಸಿಬ್ಬಂದಿಗಳು ಪ್ರಕರಣವನ್ನು ಭೇದಿಸಿದ್ದಾರೆ.
