ಬಾಗಲಕೋಟೆ ನಗರದ ನವನಗರದಲ್ಲಿರುವ ಮ್ಯೂಸಿಯಂನಲ್ಲಿ ತಲ್ಲಣ ಮೂಡಿಸುವ ಘಟನೆಯೊಂದು ಸಂಭವಿಸಿದೆ. ಕಳೆದ ಐದು ವರ್ಷಗಳಿಂದ ದಿನಗೂಲಿ ಆಧಾರದ ಮೇಲೆ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಹಠಾತ್ ಆಗಿ ಕೆಲಸದಿಂದ ತೆಗೆದುಹಾಕಿದ ಹಿನ್ನೆಲೆಯಲ್ಲಿ, ನೊಂದ ಮಹಿಳೆ ಮ್ಯೂಸಿಯಂ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.


ಆತ್ಮಹತ್ಯೆಗೆ ಯತ್ನಿಸಿದ ದುರ್ದೈವಿ ಮಹಿಳೆಯನ್ನು ಮಂಜುಳಾ ದಾಸರ ಎಂದು ಗುರುತಿಸಲಾಗಿದೆ. ಇವರು ನವನಗರದ ಮ್ಯೂಸಿಯಂನಲ್ಲಿ ಕಳೆದ 5 ವರ್ಷಗಳಿಂದ ದಿನಗೂಲಿ ನೌಕರರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಇಲಾಖೆಯು ಇವರನ್ನು ದಿಢೀರ್ ಆಗಿ ಕೆಲಸದಿಂದ ಮುಕ್ತಗೊಳಿಸಿದ್ದು, ಇದರಿಂದ ತೀವ್ರವಾಗಿ ನೊಂದ ಮಂಜುಳಾ ಅವರು ನೀರಿನ ಬಾಟಲಿಯಲ್ಲಿ ಕೀಟನಾಶಕವನ್ನು ತಂದು ಮ್ಯೂಸಿಯಂನ ಮುಖ್ಯದ್ವಾರದ ಬಳಿಯೇ ಸೇವಿಸಿದ್ದಾರೆ.


ವಿಷದ ತೀವ್ರತೆಗೆ ಮಹಿಳೆ ನೆಲಕ್ಕೆ ಬಿದ್ದು ನರಳಾಡುತ್ತಿರುವುದನ್ನು ಕಂಡ ಸ್ಥಳೀಯರು ಹಾಗೂ ಸಾರ್ವಜನಿಕರು ತಕ್ಷಣವೇ ಸಮಯಪ್ರಜ್ಞೆ ಮೆರೆದು, ಟಂಟಂ ವಾಹನದ ಮೂಲಕ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಸದ್ಯ ಮಹಿಳೆಗೆ ಚಿಕಿತ್ಸೆ ಮುಂದುವರಿದಿದೆ.
