ಖಾನಾಪುರ ತಾಲೂಕಿನ ವರಕಡೆ ಮತ್ತು ಪಾಟಯೇ ಪರಿಸರದಲ್ಲಿ ಕಳೆದ ಒಂದು ತಿಂಗಳಿನಿಂದ ಕಾಡಾನೆಗಳ ಹಿಂಡು ಭೀತಿ ಸೃಷ್ಟಿಸಿದೆ. ಆನೆಗಳ ಉಪಟಳದಿಂದಾಗಿ ಸ್ಥಳೀಯ ರೈತರು ಹಾಗೂ ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಜಮೀನುಗಳಿಗೆ ಹಾಗೂ ಲೋಂಡಾ ಮಾರುಕಟ್ಟೆಗೆ ತೆರಳಲು ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.


ವರಕಡೆ ಮತ್ತು ಪಾಟಯೇ ಭಾಗದಲ್ಲಿ ಬೀಡುಬಿಟ್ಟಿರುವ ಆನೆಗಳ ಹಿಂಡು ರೈತರ ಕಷ್ಟದ ಬೆಳೆಯನ್ನು ನಾಶಪಡಿಸುತ್ತಿದೆ. ಕಳೆದ ಹದಿನೈದು ದಿನಗಳಿಂದ ಪಾಟಯೇ ಗ್ರಾಮದ ಜಮೀನುಗಳಲ್ಲಿದ್ದ ಕಬ್ಬಿನ ಬೆಳೆಯನ್ನು ಸಂಪೂರ್ಣ ಜಖಂಗೊಳಿಸಿದ್ದ ಆನೆಗಳು, ಇದೀಗ ವರಕಡೆ ಗ್ರಾಮದ ಸರ್ವೇ ನಂಬರ್ 50 ರ ಜಮೀನಿಗೆ ನುಗ್ಗಿವೆ. ಅಲ್ಲಿನ ಅಡಿಕೆ, ತೆಂಗಿನ ಮರಗಳನ್ನು ಬೇರು ಸಮೇತ ಕಿತ್ತೆಸೆದಿರುವುದಲ್ಲದೆ, ಬಾಳೆ ತೋಟವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆ. ಈಗಾಗಲೇ ಲೋಂಡಾ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಕೇವಲ ಪರಿಶೀಲನೆಗೆ ಸೀಮಿತವಾಗದೆ ತಕ್ಷಣವೇ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಈ ಭಾಗದಿಂದ ಕಾಡಿಗಟ್ಟಬೇಕು ಎಂದು ಸಂಕಷ್ಟಕ್ಕೀಡಾದ ರೈತರು ತೀವ್ರವಾಗಿ ಒತ್ತಾಯಿಸಿದ್ದಾರೆ.

