Khanapur

ಮನತುರ್ಗಾವಾಡಾ ರಸ್ತೆ ಕಾಮಗಾರಿ ವಿಳಂಬ: ತಹಶೀಲ್ದಾರರ ಸೂಚನೆಗೂ ಕದಡದ ಪಿಡಿಓ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕ!

Share

ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ ಖಾನಾಪುರ ತಾಲೂಕಿನ ಮನತುರ್ಗಾವಾಡಾ ರಸ್ತೆಯ ಪರಿಸ್ಥಿತಿ. ತಹಶೀಲ್ದಾರರು ಸ್ವತಃ ಆದೇಶ ನೀಡಿದ್ದರೂ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯ (PDO) ನಿರ್ಲಕ್ಷ್ಯದಿಂದಾಗಿ ರಸ್ತೆ ಕಾಮಗಾರಿ ಶೂನ್ಯವಾಗಿಯೇ ಉಳಿದಿದ್ದು, ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಖಾನಾಪುರ ತಾಲೂಕಿನ ಮನತುರ್ಗಾ ಗ್ರಾಮದಿಂದ ಮನತುರ್ಗಾವಾಡಾಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಕಾಮಗಾರಿ ನನೆಗುದಿಗೆ ಬಿದ್ದಿರುವುದಕ್ಕೆ ಆಡಳಿತ ವ್ಯವಸ್ಥೆಯ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಳೆಯ ಕಾಲದಿಂದಲೂ ಬಳಕೆಯಲ್ಲಿದ್ದ ಈ ರಸ್ತೆಯನ್ನು ಅಧಿಕೃತವಾಗಿ ಅಭಿವೃದ್ಧಿಪಡಿಸಲು ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ನಕ್ಷೆಯ ಪ್ರಕಾರ ಸುಮಾರು 9.2 ಅಡಿ ಅಗಲದ ರಸ್ತೆ ಸಮೀಕ್ಷೆಯನ್ನು ಪೂರ್ಣಗೊಳಿಸಿದ್ದರು. ಅಲ್ಲದೆ, ಈ ಕಾಮಗಾರಿಯ ಒಂದು ಭಾಗವನ್ನು ಮನರೇಗಾ (MGNREGA) ಯೋಜನೆಯಡಿ ಸೇರಿಸಲಾಗಿದ್ದರೂ, ಸ್ಥಳೀಯ ಕೆಲವು ವ್ಯಕ್ತಿಗಳ ವಿರೋಧದ ನೆಪವೊಡ್ಡಿ ಕಾಮಗಾರಿಯನ್ನು ಸಂಪೂರ್ಣವಾಗಿ ನನೆಗುದಿಗೆ ತಳ್ಳಲಾಗಿದೆ.
ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ರಸ್ತೆ ಅತ್ಯಂತ ಅಗತ್ಯವಾಗಿರುವುದರಿಂದ, ತಹಶೀಲ್ದಾರರು ಶೀಘ್ರ ಕಾಮಗಾರಿ ಆರಂಭಿಸುವಂತೆ ಪಿಡಿಓ ಅವರಿಗೆ ಖಡಕ್ ಸೂಚನೆ ನೀಡಿದ್ದರು. ಆದರೆ ತಹಶೀಲ್ದಾರರ ಆದೇಶಕ್ಕೂ ಕ್ಯಾರೆ ಎನ್ನದ ಪಿಡಿಓ ಅವರ ನಿರ್ಲಕ್ಷ್ಯ ಧೋರಣೆಯಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ದಿನಾಲೂ ಪರದಾಡುವಂತಾಗಿದೆ. ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಬೇಕಾದ ಅಧಿಕಾರಿಯೇ ಹೀಗೆ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (CEO) ಕೂಡಲೇ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಿ, ಪಿಡಿಓ ಅವರಿಂದ ವರದಿ ಪಡೆದು ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Tags:

error: Content is protected !!