hubbali

ತುಷ್ಟೀಕರಣದ ಪರಾಕಾಷ್ಠೆ ತಲುಪಿರುವ ಕಾಂಗ್ರೆಸ್ ಸರ್ಕಾರ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Share

ರಾಜ್ಯ ಸರ್ಕಾರ 52 ಪ್ರಕರಣಗಳನ್ನು ವಾಪಸ್ ಪಡೆದ ಹಿನ್ನಲೆ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
“ರಾಜ್ಯ ಸರ್ಕಾರ 52 ಪ್ರಕರಣಗಳನ್ನು ವಾಪಸ್ ಪಡೆದಿದೆ. ತೋರಿಕೆಗೆ ಕೆಲವು ಕನ್ನಡ ಹೋರಾಟಗಾರರು, ರೈತ ಹೋರಾಟಗಾರರು ಹಾಗೂ ಹಿಂದೂ ಹೋರಾಟಗಾರರ ಪ್ರಕರಣಗಳನ್ನು ಸೇರಿಸಿದರೂ, ದುರುದ್ದೇಶಪೂರ್ವಕ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡಲಾಗಿದೆ. ದೇವಸ್ಥಾನ ಅಪವಿತ್ರಗೊಳಿಸಿದವರು, ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದವರ ವಿರುದ್ಧದ ಪ್ರಕರಣಗಳನ್ನೂ ವಾಪಸ್ ಪಡೆಯಲಾಗಿದೆ. ಇದು ಇಸ್ಲಾಮಿಕ್ ಶಕ್ತಿಗಳನ್ನು ಬಿಡುವ ಸಲುವಾಗಿ ತೆಗೆದುಕೊಂಡ ನಿರ್ಧಾರ,” ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ತುಷ್ಟೀಕರಣ ನೀತಿ ಪರಾಕಾಷ್ಠೆ ತಲುಪಿದ್ದು, ಅದರ ಸ್ಪಷ್ಟ ಉದಾಹರಣೆಯಾಗಿ ಕೇವಲ ಮುಸ್ಲಿಂ ಕಾಲೋನಿಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿರುವುದನ್ನು ಉಲ್ಲೇಖಿಸಿದರು. ಅಲ್ಪಸಂಖ್ಯಾತರ ಕಾಲೇಜು, ಶಾಲೆ ಹಾಗೂ ವಸತಿ ನಿಲಯಗಳ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡಲಾಗಿದೆ ಎಂದು ದೂರಿದರು.

“ಕಾಂಗ್ರೆಸ್ ಪಕ್ಷ ತುಷ್ಟೀಕರಣ ರಾಜಕಾರಣದಿಂದ ದೇಶದಲ್ಲಿ ನಿರ್ನಾಮದತ್ತ ಸಾಗುತ್ತಿದೆ. ಗಂಭೀರ ಸ್ವರೂಪದ ಪ್ರಕರಣಗಳನ್ನೂ ಹಿಂಪಡೆಯಲಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಗಲಭೆ, ಹಲ್ಲೆ, ಕಲ್ಲುತೂರಾಟ ಹಾಗೂ ಬೆಂಗಳೂರಿನ ಗಲಭೆಗಳ ಪ್ರಕರಣಗಳನ್ನು ಕೈಬಿಡಲು ಪ್ರಯತ್ನಿಸಲಾಗಿದೆ. ಈ ಕುರಿತು ನ್ಯಾಯಾಲಯವೇ ಪ್ರಶ್ನೆ ಮಾಡಿದೆ,” ಎಂದರು.

165 ಜನರು ಅತ್ಯಂತ ವ್ಯವಸ್ಥಿತವಾಗಿ ದಾಳಿ ನಡೆಸಿದ್ದರು. ಇಂತಹ ಪ್ರಕರಣಗಳನ್ನು ವಾಪಸ್ ಪಡೆಯುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಸರ್ಕಾರ ಮತಾಂಧ ತುಷ್ಟೀಕರಣ ನೀತಿಯನ್ನು ಕೈಬಿಡಬೇಕು. ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.

ಎಸ್‌ಐಆರ್ ವಿಚಾರವಾಗಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದರ ಬಗ್ಗೆ ಮಾತನಾಡಿದ ಅವರು, “ಕಾಂಗ್ರೆಸ್‌ಗೆ ಸ್ಪಷ್ಟ ನೀತಿ ಇಲ್ಲ. ರಾಹುಲ್ ಗಾಂಧಿ ಅವರು ಪ್ರತಿದಿನ ಒಂದೊಂದು ರೀತಿಯಲ್ಲಿ ಮಾತನಾಡುತ್ತಾರೆ. ಕೇರಳದಲ್ಲಿ ಎಸ್‌ಐಆರ್‌ಗೆ ಸ್ವಾಗತಿಸಿದ್ದಾರೆ, ತಮಿಳುನಾಡಿನಲ್ಲಿ ಯಾವುದೇ ವಿರೋಧವಿಲ್ಲ. ಕಾಂಗ್ರೆಸ್ ಪಕ್ಷ ದಿವಾಳಿ ಆಗಿದೆ,” ಎಂದು ಟೀಕಿಸಿದರು.

“ದೇಶದ ಗಡಿಭಾಗಗಳಾದ ತ್ರಿಪುರಾ ಹಾಗೂ ಅಸ್ಸಾಂ ಮೂಲಕ ಬಾಂಗ್ಲಾದೇಶದಿಂದ ಅಕ್ರಮ ಪ್ರವೇಶ ಹೆಚ್ಚಾಗಿದೆ. ಮಮತಾ ಬ್ಯಾನರ್ಜಿ ಅವರ ಆಡಳಿತದಲ್ಲಿ ಇದು ಹೆಚ್ಚಾಗಿದೆ. ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಇದು ದ್ವಂದ್ವ ನಿಲುವು,” ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷ ಆಧುನಿಕ ಮುಸ್ಲಿಂ ಲೀಗ್ ಆಗಲು ಪ್ರಯತ್ನಿಸುತ್ತಿದ್ದು, ಅದರ ಚಿಂತನೆಗಳಲ್ಲಿ ಅದೇ ಮನೋಭಾವ ಇದೆ ಎಂದು ದೂರಿದರು.

ರಾಹುಲ್ ಗಾಂಧಿ ನಿರಂತರ ಸೋಲಿನಿಂದ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಪೆಟ್ರೋಲ್-ಡೀಸೆಲ್ ಲಭ್ಯತೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಮಧ್ಯಪ್ರಾಚ್ಯಕ್ಕೆ ಅವಲಂಬಿತವಾಗಿದ್ದ ಪರಿಸ್ಥಿತಿಯಿಂದ ಈಗ 42 ಮೂಲಗಳಿಂದ ಇಂಧನ ತರಿಸಿಕೊಳ್ಳುತ್ತಿರುವುದರಿಂದ ವೆಚ್ಚ ಹೆಚ್ಚಾಗಿದೆ ಎಂದು ಸ್ಪಷ್ಟಪಡಿಸಿದರು.

ಕೊನೆಯಲ್ಲಿ, “ಸತ್ತವರ ಮೇಲೂ ಹಣ ವಸೂಲಿ ಮಾಡುವ ಸರ್ಕಾರ ಕಾಂಗ್ರೆಸ್‌ದು. ಇದು ದರೋಡೆಕೋರ ಸರ್ಕಾರ,” ಎಂದು ತೀವ್ರ ಟೀಕಿಸಿದರು.

Tags:

error: Content is protected !!