ಇಂಧನ ದರ ಏರಿಕೆ, ಪ್ರಧಾನಿ ಮೋದಿಯವರ ವಿದೇಶ ಪ್ರವಾಸ ಹಾಗೂ ರಾಜ್ಯ ರಾಜಕೀಯದ ಸಿಎಂ ಬದಲಾವಣೆ ಗೊಂದಲಗಳ ಕುರಿತು ಸಚಿವ ಸತೀಶ್ ಜಾರಕಿಹೊಳಿ ಬಾಗಲಕೋಟೆಯಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಹಾಗೂ ರಾಜ್ಯ ಬಿಜೆಪಿ ನಾಯಕರ ಸೈಕಲ್ ಸವಾರಿಯ ಗಿಮಿಕ್ಗಳನ್ನು ಕಟುವಾಗಿ ಟೀಕಿಸಿರುವ ಅವರು, ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಕಾಯುತ್ತಿದ್ದೇವೆ ಎಂದಿದ್ದಾರೆ.

ಬಾಗಲಕೋಟೆಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ದೇಶದಲ್ಲಿ ಸತತವಾಗಿ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಸಬ್ಸಿಡಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಕೇಂದ್ರದ ಬಿಜೆಪಿ ಸರ್ಕಾರ ಪ್ರತಿ ವಾರ ಮೂರು ರೂಪಾಯಿಯಂತೆ ದರ ಏರಿಸುತ್ತಾ ಹೋದರೆ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗುತ್ತದೆಯೇ ವಿನಃ ಸಮಸ್ಯೆಗೆ ಪರಿಹಾರ ಸಿಗಲ್ಲ, ಹೀಗಾಗಿ ಕೇಂದ್ರವೇ ಸೂಕ್ತ ಮಾರ್ಗ ಹುಡುಕಬೇಕು ಎಂದು ಆಗ್ರಹಿಸಿದರು. ನೂರಕ್ಕೆ ನೂರರಷ್ಟು ಇವರಿಗೆ ಆಡಳಿತ ನಿಭಾಯಿಸಲು ಆಗುತ್ತಿಲ್ಲ ಎಂದು ಕಿಡಿಕಾರಿದ ಅವರು, ಮುಂದೆ ರೇಷನ್ ಶೇಖರಣೆ ಸೇರಿದಂತೆ ಜನಸಾಮಾನ್ಯರಿಗೆ ಇನ್ನು ಏನೆಲ್ಲಾ ಅನಾಹುತ ಕಾದಿದೆಯೋ ಮತ್ತು ಇವರ ಹಿಡನ್ ಅಜೆಂಡಾ ಏನಿದೆಯೋ ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿ ಚಾಕೊಲೇಟ್ ಹಂಚಿದ್ದೇ ದೊಡ್ಡ ಸುದ್ದಿಯಾಯಿತೇ ಹೊರತು ದೇಶದ ಅಭಿವೃದ್ಧಿ ಬಗ್ಗೆ ಚರ್ಚೆಯಾಗದಿರುವುದು ದುರ್ದೈವ ಎಂದ ಸಚಿವರು, ದೆಹಲಿ ಮಾಧ್ಯಮಗಳು ಇಂತಹ ವಿಷಯಗಳ ಬಗ್ಗೆ ಗಮನಹರಿಸಬೇಕು ಎಂದು ಚಾಟಿ ಬೀಸಿದರು.

ದೇಶಾದ್ಯಂತ ವೈರಲ್ ಆಗುತ್ತಿರುವ ‘ಕಾಕ್ರೋಚ್ ಜನತಾ’ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಜನ ಮಿತಿ ಮೀರಿದಾಗ ಇತಿಹಾಸದಲ್ಲಿ ಇಂದಿರಾ ಗಾಂಧಿ, ವಾಜಪೇಯಿ ಹಾಗೂ ಮೊರಾರ್ಜಿ ದೇಸಾಯಿ ಅವರಂತಹ ಘಟಾನುಘಟಿಗಳನ್ನೇ ಸೋಲಿಸಿದ್ದಾರೆ, ಮುಂದಿನ ಸರದ ಇವರದ್ದೇ(ಮೋದಿ) ಆಗಿದೆ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು ಎಂದರು. ಕೇವಲ ಮೂರೇ ದಿನದಲ್ಲಿ ಈ ಅಭಿಯಾನ ದೊಡ್ಡ ಸಂಚಲನ ಸೃಷ್ಟಿಸಿದ್ದರಿಂದ ಹೆದರಿದ ಬಿಜೆಪಿ ಇದನ್ನು ಹ್ಯಾಕ್ ಮಾಡಿ ಸ್ಟಾಪ್ ಮಾಡಿಸಿದೆ ಮತ್ತು ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಎಂದಿನಂತೆ ಪಾಕಿಸ್ತಾನದ ಹೆಸರನ್ನು ಎಳೆದು ತರುತ್ತಿದೆ ಎಂದು ವ್ಯಂಗ್ಯವಾಡಿದರು. ಸಿಎಂ ಸಿದ್ದರಾಮಯ್ಯ ಅವರು ಕಾಕ್ರೋಚ್ ಟೀ ಶರ್ಟ್ ಅನಾವರಣಗೊಳಿಸಿರುವುದನ್ನು ಸಮರ್ಥಿಸಿದ ಅವರು, ಬಿಜೆಪಿಯನ್ನು ಎದುರಿಸಬೇಕಾದರೆ ಈಗ ಎಲ್ಲರೂ ಒಂದೇ ವೇದಿಕೆಗೆ ಬರುವ ಅವಶ್ಯಕತೆ ಇದೆ ಎಂದು ಕರೆ ನೀಡಿದರು. ಇದೇ ವೇಳೆ ಮಿತವ್ಯಯದ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ ಮುಖಂಡರು ಸೈಕಲ್ ಏರಿ ಫೋಟೋಗೆ ಫೋಸ್ ಕೊಡುವುದನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಭದ್ರತೆ ಹಾಗೂ ಸಮಯದ ಅಭಾವದಿಂದ ಇಂತಹ ಗಿಮಿಕ್ಗಳನ್ನು ದಿನಾಲೂ ಮಾಡಲು ಸಾಧ್ಯವಿಲ್ಲ ಎಂದು ಟೀಕಿಸಿದರು.
ರಾಜ್ಯ ರಾಜಕಾರಣದ ತೀವ್ರ ಕುತೂಹಲ ಕೆರಳಿಸಿರುವ ಮುಖ್ಯಮಂತ್ರಿ ಸ್ಥಾನದ ಬಿಕ್ಕಟ್ಟು ಹಾಗೂ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಮಾತನಾಡಿದ ಸಚಿವರು, ಸಿಎಂ ಬದಲಾವಣೆಯ ಗೊಂದಲ ಬೆಂಗಳೂರು ನಾಯಕರಿಗೆ ಹಾಗೂ ದೆಹಲಿ ವರಿಷ್ಠರಿಗೆ ಬಿಟ್ಟ ವಿಚಾರವಾಗಿದ್ದು, ನಾವೂ ಕೂಡ ಮುಂದಿನ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದರು. ಪಂಚರಾಜ್ಯಗಳ ಚುನಾವಣೆ ಮುಗಿದ ನಂತರ ಈ ಬಿಕ್ಕಟ್ಟು ಶಮನವಾಗಲಿ ಎನ್ನುವುದು ನಮ್ಮ ಮನವಿಯಾಗಿದೆ ಎಂದು ತಿಳಿಸಿದರು. ಸಿಎಂ ರೇಸ್ನಲ್ಲಿ ತಮ್ಮ ಹೆಸರು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಪ್ರತಿ ನಾಯಕರಿಗೂ ಅವರದ್ದೇ ಆದ ಅಭಿಮಾನಿ ಬಳಗ ಇರುತ್ತದೆ ಮತ್ತು ಅವರು ತಮ್ಮ ನಾಯಕ ಸಿಎಂ ಆಗಲಿ ಎಂದು ಆಸೆಪಡುವುದು ಸಹಜ, ಆದರೆ ತಾವೂ ಯಾವುದೇ ಡಿಸಿಎಂ ಅಥವಾ ಸಿಎಂ ಸ್ಥಾನದ ಆಕಾಂಕ್ಷಿಯಲ್ಲ ಹಾಗೂ ಅಂತಿಮವಾಗಿ ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದರು. ಇದೇ ವೇಳೆ ಸಿಎಂ ಬಿಕ್ಕಟ್ಟಿನಿಂದ ಅಧಿಕಾರಿಗಳು ಸಚಿವರ ಮಾತು ಕೇಳುತ್ತಿಲ್ಲ ಎಂಬ ವದಂತಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಅವರು, ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ, ಅಭಿವೃದ್ಧಿ ಫೈಲ್ಗಳಿಗೆ ನಾವೇ ಸಹಿ ಮಾಡುತ್ತಿದ್ದು ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುತ್ತಿವೆ ಎಂದು ಸ್ಪಷ್ಟನೆ ನೀಡಿದರು.
