ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್, ಮಟಕಾ ದಂಧೆ ಹಾಗೂ ಗಾಂಜಾ ಸೇವನೆ ಮಾಡುತ್ತಿದ್ದ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ.


ತಿಲಕವಾಡಿ ಪೊಲೀಸರು ವ್ಯಾಕ್ಸಿನ್ ಡಿಪೋ ಹತ್ತಿರ ದಾಳಿ ನಡೆಸಿ ಆನ್‌ಲೈನ್ ಮೂಲಕ ಐಪಿಎಲ್ ಬೆಟ್ಟಿಂಗ್ ಆಡಿಸುತ್ತಿದ್ದ ಉದ್ಯಮಬಾಗದ ಯಾದವ ಕಾಲನಿಯ ವಿಶಾಲ ನಾಗೋಜಿ ಪಾಟೀಲ (28) ಎಂಬಾತನನ್ನು ಬಂಧಿಸಿ, 20,000 ರೂ. ಮೌಲ್ಯದ ಆ್ಯಪಲ್ ಮೊಬೈಲ್ ಹಾಗೂ 5,000 ರೂ. ನಗದನ್ನು ವಶಪಡಿಸಿಕೊಂಡಿದ್ದು, ತನಿಖೆ ವೇಳೆ ಈ ದಂಧೆಯಲ್ಲಿ ರೋಹನ ಎಂಬ ಮತ್ತೊಬ್ಬ ಆರೋಪಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಮತ್ತೊಂದೆಡೆ, ಮಟಕಾ ಜೂಜಾಟದ ವಿರುದ್ಧ ನಡೆದ ದಾಳಿಯಲ್ಲಿ ಮಜಗಾಂವನ ಮಾರುತಿ ಗಲ್ಲಿಯ ಸಹದೇವ ಅಣ್ಣಪ್ಪ ಶೇಲ್ಯಾಗೋಳ (56), ಲಾಟ ರಸ್ತೆಯ ಶ್ರೀಸಾಯಿ ಕಾಲನಿಯ ಶ್ರೀಧರ ರಘುರಾಮ ಶೆಟ್ಟ (57) ಮತ್ತು ಶಹಾಪೂರ ತಾಂಬಿಟಕರ್ ಗಲ್ಲಿಯ ನಾಸಿರಅಹ್ಮದ ನೌಶಾದ ಬೋಜಗಾರ (36) ಎಂಬುವವರನ್ನು ಪೊಲೀಸರು ಹೆಡೆಮುರುಳಿಕಟ್ಟಿದ್ದಾರೆ.

ಇದೇ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತು ಗಾಂಜಾ ಸೇವಿಸಿ ಅಸಹಜವಾಗಿ ವರ್ತಿಸುತ್ತಿದ್ದವರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಲಾಗಿದೆ. ಸರಾಫ ಕಾಲನಿಯಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಲಕ್ಷ್ಮಿ ಟಾವರ್ ನಿವಾಸಿ ವಿನಾಯಕ ರಾಮದಾಸ ಬೀಡಿಕರ (26), ಮುಚ್ಚಂಡಿಯ ಲಕ್ಷ್ಮಿ ಗಲ್ಲಿಯ ಸುಧೀರ ಬಸವಣ್ಣಿ ಗುಂಡಾನಿ (31) ಹಾಗೂ ಸಾಂಬ್ರಾ ಮಹಾದೇವ ನಗರದ ದೀಪಕ ಶಿವಾಜ ಸೋನಾಜ (30) ಎಂಬುವವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ. ತಿಲಕವಾಡಿ ಪೊಲೀಸ್ ಠಾಣೆಯ ಪಿಐ ಪರುಶರಾಮ ಪೂಜೇರಿ, ಪಿಎಸ್‌ಐ ವಿಶ್ವನಾಥ ಗಂಟಾಮಠ, ಉದ್ಯಮಬಾಗ ಪಿಎಸ್‌ಐ ಪಿ. ಐ. ಗಂಡವಗೋಳ, ಮಾರ್ಕೆಟ್ ಪಿಎಸ್‌ಐ ಶಶಿಕುಮಾರ ಕುರಳೆ ಮತ್ತು ಮಾರಿಹಾಳ ಪಿಎಸ್‌ಐ ಮಂಜುನಾಥ ಹುಲಕುಂದ ಹಾಗೂ ಅವರ ಸಿಬ್ಬಂದಿ ವರ್ಗದವರು ಈ ಯಶಸ್ವಿ ದಾಳಿಗಳನ್ನು ನಡೆಸಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಯ ಭರ್ಜರಿ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
