ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಇಂಧನ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ತೀವ್ರ ವಾಗ್ದಾಳಿ ನಡೆಸಿದ್ದಾರೆ. ಯುಪಿಎ ಮತ್ತು ಎನ್‌ಡಿಎ ಸರ್ಕಾರದ ಅವಧಿಯ ಬೆಲೆಗಳನ್ನು ಹೋಲಿಸಿ ಪ್ರಧಾನಿ ಮೋದಿ ವಿರುದ್ಧ ಸಿಎಂ ಗುಡುಗಿದ್ದಾರೆ.

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಕೇಂದ್ರ ಸರ್ಕಾರ ನಿರಂತರವಾಗಿ ಬೆಲೆ ಏರಿಸುತ್ತಿದ್ದರೆ, ನಾವು ಇಲ್ಲಿ ಬೆಲೆ ಕಡಿಮೆ ಮಾಡುತ್ತಾ ಕೂರಬೇಕಾ?” ಎಂದು ಖಾರವಾಗಿ ಪ್ರಶ್ನಿಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಪೆಟ್ರೋಲ್ ಬೆಲೆ 70 ರೂಪಾಯಿ, ಡೀಸೆಲ್ 48 ರೂಪಾಯಿ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಕೇವಲ 414 ರೂಪಾಯಿ ಇತ್ತು ಎಂಬುದನ್ನು ನೆನಪಿಸಿದ ಅವರು, ಇಂದು ಮೋದಿ ಸರ್ಕಾರದಲ್ಲಿ ಈ ಬೆಲೆಗಳು ಎಲ್ಲಿಗೆ ಬಂದು ತಲುಪಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದ ಜನಸಾಮಾನ್ಯರ ಮೇಲೆ ಹೊರೆ ಹಾಕುತ್ತಿರುವ ಈ ಬೆಲೆ ಏರಿಕೆಗೆ ನೇರವಾಗಿ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದ ಮುಖ್ಯಮಂತ್ರಿಗಳು, ಕೇಂದ್ರದ ತಪ್ಪು ನೀತಿಗಳನ್ನು ರಾಜ್ಯ ಸರ್ಕಾರಗಳು ಸರಿಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

